|ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ನಿವೇಶನ, ಮನೆ, ಜಮೀನು ಖರೀದಿಸುವವರಿಗೆ ಸರ್ಕಾರ ಯುಗಾದಿ ಹಬ್ಬದಲ್ಲಿ ಸಿಹಿಸುದ್ದಿ ನೀಡಿದೆ. ಜಮೀನಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ದರ ಕಡಿಮೆ ಮಾಡಿರುವುದನ್ನು ಮುಂದುವರಿಸುವ ಮಹತ್ವದ ತೀರ್ಮಾನ ಪ್ರಕಟಿಸಿದೆ. ರಿಯಲ್ ಎಸ್ಟೇಟ್ ಉದ್ಯಮ ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಲು ಸರ್ಕಾರ ಮಾರ್ಗಸೂಚಿ ಬೆಲೆಯನ್ನು ಶೇ.10 ಕಡಿತ ಮಾಡಿತ್ತು. ಇದೀಗ ಮತ್ತೆ 3 ತಿಂಗಳು ವಿನಾಯಿತಿ ಮುಂದುವರಿಸಲು ನಿರ್ಧರಿಸಿದೆ. ಮಾರ್ಗಸೂಚಿ ಬೆಲೆ ಕಡಿಮೆ ಮಾಡಿದ್ದರಿಂದ ನೋಂದಣಿ ಪ್ರಮಾಣ ಹೆಚ್ಚಾಗಿದೆ. ಸರ್ಕಾರಕ್ಕೆ ನಿರೀಕ್ಷೆ ಮೀರಿ 1000 ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯ ಬಂದಿದೆ. ಆದ್ದರಿಂದ ಮತ್ತಷ್ಟು ನೋಂದಣಿ ಆಗಲಿ ಎಂಬುದು ಸರ್ಕಾರದ ಉದ್ದೇಶ.
ಎಷ್ಟು ದಿನ ವಿಸ್ತರಣೆ?: ಸರ್ಕಾರ ಹಿಂದೆ 2 ಅಥವಾ 3 ವರ್ಷಕ್ಕೊಮ್ಮೆ ಮಾರ್ಗಸೂಚಿ ಬೆಲೆಯನ್ನು ಶೇ. 10 ರಿಂದ 40ರ ತನಕ ಏರಿಸುತ್ತಿತ್ತು. ಆದರೆ ಕಂದಾಯ ಸಚಿವ ಅಶೋಕ್ ಮೊದಲ ಬಾರಿಗೆ ಕಳೆದ ಡಿಸೆಂಬರ್ನಲ್ಲಿ ಮಾರ್ಗಸೂಚಿ ಬೆಲೆ ಇಳಿಸುವ ನಿರ್ಧಾರ ಕೈಗೊಂಡರು. ಅವರ ನಿರ್ಧಾರ ಉತ್ತಮವಾಗಿತ್ತೆಂಬುದು ನೋಂದಣಿ ಪ್ರಮಾಣದಲ್ಲಿನ ಏರಿಕೆಯಿಂದ ಸಾಬೀತಾಗಿದೆ. ಆದ್ದರಿಂದಲೇ ಮಾರ್ಗಸೂಚಿ ಬೆಲೆ ಇಳಿಕೆಯನ್ನು ಮತ್ತೆ 3 ತಿಂಗಳು (ಜೂನ್ ಅಂತ್ಯದವರೆಗೆ) ವಿಸ್ತರಿಸಲಾಗಿದೆ.
ಕಾರಣಗಳೇನು?; ಕರೊನಾ ಸಂಕಷ್ಟದಿಂದಾಗಿ ಇನ್ನೂ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ. ಇಂತಹ ಸಂದರ್ಭದಲ್ಲಿ ಮಾರ್ಗಸೂಚಿ ಬೆಲೆ ಕಡಿಮೆಯಾದರೆ ಖರೀದಿ ಸ್ವಲ್ಪ ಹೆಚ್ಚಾಗುತ್ತದೆ. ಖರೀದಿದಾರರಿಗೂ ಅನುಕೂಲ ಹಾಗೂ ಸರ್ಕಾರಕ್ಕೂ ಆದಾಯ. ಒಂದು ರೀತಿಯಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯೋಚನೆ ಸರ್ಕಾರದ್ದಾಗಿದೆ.
| ಆರ್. ಅಶೋಕ್ ಕಂದಾಯ ಸಚಿವ
ಮುದ್ರಾಂಕ ಶುಲ್ಕ ಕಡಿತ: ಕರೊನಾದಿಂದ ತತ್ತರಿಸಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ ಮಾಡಲು ಸರ್ಕಾರ ಜೂನ್ ತಿಂಗಳಿನಲ್ಲಿ 45 ಲಕ್ಷ ರೂ.ಗಳ ತನಕದ ಅಪಾರ್ಟ್ ಮೆಂಟ್ಗಳ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ. 5.65 ರಿಂದ ಶೇ.3ಕ್ಕೆ ಇಳಿಸಿತ್ತು. ಅದನ್ನೂ ಮುಂದುವರಿಸಲು ನಿರ್ಧರಿಸಲಾಗಿದೆ.