ರಿಪ್ಪನ್‌ಪೇಟೆ: ಜೀವನದಲ್ಲಿ ಧಾರ್ಮಿಕ ಪ್ರಜ್ಞೆಯಿಂದ ಕಂಕಣಬದ್ಧರಾಗಿ ನಿರ್ದಿಷ್ಟ ಕಾರ್ಯದಲ್ಲಿ ತಲ್ಲೀನರಾಗುವುದರಿಂದ ಯಶಸ್ಸು ನಿಶ್ಚಿತ ಎಂದು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಸಮೀಪದ ಹೊಂಬುಜ ಜೈನ ಮಠದಲ್ಲಿ ನವರಾತ್ರಿಯ 6ನೇ ದಿನ ಶ್ರೀ ಪದ್ಮಾವತಿ ದೇವಿಗೆ ಬಳೆ ಅಲಂಕಾರ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಬಳೆ ಎಂಬುದು ಭಾರತೀಯ ಪರಂಪರೆಯಲ್ಲಿ ಶ್ರೇಷ್ಠವಾಗಿದೆ. ಮಹಿಳೆಯರಿಗೆ ಬಳೆಯು ಮಂಗಲಕರವಾಗಿದ್ದು ಸುಸಂಸ್ಕೃತ ಕುಟುಂಬ ಜವಾಬ್ದಾರಿ ನಿರ್ವಹಿಸುತ್ತಾರೆ. ಸೀಗೆ ಭಾರತೀಯ ಪರಂಪರೆ ವಿಶೇಷ ಗೌರವಾಧಾರ ನೀಡುತ್ತಿದ್ದು ಬಳೆಯ ಸಮರ್ಪಣೆ ಒಂದು ಅಭೂತಪೂರ್ವ ಅನುಭೂತಿ. ಅಂತಹ ಕಾರ್ಯವನ್ನು ಶರನ್ನವರಾತ್ರಿಯಲ್ಲಿ ಮಾಡುವುದರಿಂದ ಜೀವನ ಮತ್ತು ಸಮಾಜದ ಶ್ರೇಯಸ್ಸು ಸಾಧ್ಯ ಎಂದರು.
ಶರನ್ನವರಾತ್ರಿ ಉತ್ಸವಕ್ಕೆ ಪ್ರಾತಃಕಾಲ ಕುಮದ್ವತಿ ತೀರ್ಥದಿಂದ ಅಗ್ರೋದಕವನ್ನು ಮಂತ್ರಘೋಷ, ಜಿನಭಜನೆಯೊಂದಿಗೆ ಕ್ಷೇತ್ರದ ಸನ್ನಿಧಿಗೆ ತರಲಾಯಿತು. ಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ, ಮಠದ
ಶ್ರೀನೇಮಿನಾಥ ಸ್ವಾಮಿ, ಮಕ್ಕಳ ಜಿನಾಲಯ, ತ್ರಿಕೂಟ ಜಿನಾಲಯ, ಶ್ರೀ ಕ್ಷೇತ್ರಪಾಲ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.