ಮೈಕಲ್ ಬೇ 
ನ್ಯೂಸ್

Michael Bay - ಕೊಲ್ಲಿ ಯುದ್ಧದ ಕುರಿತು ಸಿನಿಮಾ ಘೋಷಿಸಿದ ಮೈಕಲ್​ ಬೇ


ಕೂಸು ಹುಟ್ಟೋಕೂ ಮುನ್ನವೇ ಕುಲಾವಿ ಹೊಲಿಸಿದರು ಎಂಬ ಗಾದೆ ಮಾತಿದೆ. ಆ ಮಾತು ಹಾಲಿವುಡ್​ ನಿರ್ದೇಶಕ ಮೈಕಲ್​ ಬೇ ವಿಷಯದಲ್ಲಿ ನೂರಕ್ಕೆ ನೂರು ಪ್ರತಿಶತಃ ಸತ್ಯ ಎಂಬಂತಾಗಿದೆ. ಅದಕ್ಕೆ ಕಾರಣ ಇರಾನ್​ ವಿರುದ್ಧ ಅಮೆರಿಕ, ಇಸ್ರೇಲ್​ ಜಂಟಿ ಯುದ್ಧ ಸಾರಿದ್ದು, ಪ್ರತಿದಿನ ಕೊಲ್ಲಿ ರಾಷ್ಟ್ರದಲ್ಲಿ ಬಾಂಬ್​ಗಳ ಮಳೆಗೈಯಲಾಗುತ್ತಿದೆ. 2022ರಲ್ಲಿ ಪ್ರಾರಂಭವಾದ ರಷಿಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ಇದೀಗ ಕೊಲ್ಲಿಯಲ್ಲಿ ಪ್ರಾರಂಭವಾಗಿರುವ ಈ ಸಮರ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ಆದರೆ, ಅದಕ್ಕೂ ಮುನ್ನವೇ "ಟ್ರಾನ್ಸ್ ಫಾರ್ಮರ್ಸ್​​' ಮತ್ತು "ಬ್ಯಾಡ್​ ಬಾಯ್ಸ್​' ಸರಣಿಗಳ ಖ್ಯಾತಿಯ ಹಾಲಿವುಡ್​ ನಿರ್ದೇಶಕ ಮೈಕಲ್​ ಬೇ ಯುದ್ಧದ ಸಮಯದಲ್ಲಿ ಇರಾನ್​ನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಘೋಷಿಸಿದ್ದಾರೆ. ಇರಾನ್​ ಮೇಲೆ ಯುದ್ಧ ಸಾರಿ ಆಪರೇಷನ್​ ಎಪಿಕ್​ ಫ್ಯೂರಿ ಕೈಗೊಂಡ ಅಮೆರಿಕ ವಾಯುಸೇನೆಯ ಮೂಲಕ ದಾಳಿ ನಡೆಸಿತ್ತು. ಆಪರೇಷನ್​ ಯಶಸ್ವಿಯಾದರೂ, ಅಮೆರಿಕ ವಾಯುಸೇನೆಯ ಎಫ್​ಐ15 ಇ ಸ್ಕ್ರೈಕ್​​ ಈಗಲ್​ ಯುದ್ಧವಿಮಾನವನ್ನು ಇರಾನ್​ ಸೈನಿಕರು ಹೊಡೆದುರುಳಿಸಿದ್ದರು. ಅದರಲ್ಲಿದ್ದ ಇಬ್ಬರು ಅಮೆರಿಕ ಸೈನಿಕರು ಶತ್ರು ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದರು. ಅದಾಗಿ ಒಂದು ತಿಂಗಳಲ್ಲಿ ನುರಿತ ತಂಡವನ್ನು ಕಳುಹಿಸಿದ್ದ ಅಮೆರಿಕ ಇಬ್ಬರೂ ಸೈನಿಕರನ್ನು ರೆಸ್ಕ್ಯೂ ಮಾಡಿತ್ತು. ಅಲ್ಲಿಯವರೆಗೆ ಆ ಇಬ್ಬರು ಸೈನಿಕರು ಇರಾನ್​ನಲ್ಲಿ ಹೇಗೆ ಹೋರಾಟ ನಡೆಸಿದ್ದರು? ಹೇಗೆ ಬದುಕುಳಿದರು? ಅವರ ರಕ್ಷಣಾ ಕಾರ್ಯ ಹೇಗೆ ನಡೆಯಿತು? ಎಂಬುದರ ಸುತ್ತ ಸಿನಿಮಾ ಸಾಗುತ್ತದೆ. ರಕ್ಷಣೆಗೆ ಒಳಗಾಗಿದ್ದ ಅಮೆರಿಕ ವಾಯುಸೇನೆಯ ಅಧಿಕಾರಿ ಮಿಚೆಲ್​. ಇರಾನ್​ನಲ್ಲಿ ತಮಗಾದ ಅನುಭವಗಳ ಕುರಿತು ಪುಸ್ತಕ ಬರೆಯುತ್ತಿದ್ದು, ಅದನ್ನು ಆಧರಿಸಿ ಮೈಕಲ್​ ಬೇ ಸಿನಿಮಾ ಮಾಡಲಿದ್ದಾರೆ. 2027ರಲ್ಲಿ ಪುಸ್ತಕ ಹೊರಬರಲಿದ್ದು, ಸಿನಿಮಾ 2028ರ ಅಂತ್ಯಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ.