ತೀರ್ಥಹಳ್ಳಿ: ತಾಲೂಕಿನಲ್ಲಿ ಪತ್ತೆಯಾಗಿರುವ ಕರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿ ನಿಜಕ್ಕೂ ಭಯಾನಕ. ಪುಣೆಯಿಂದ ತೀರ್ಥಹಳ್ಳಿ ತಾಲೂಕಿನ ಸ್ವಗ್ರಾಮಕ್ಕೆ ಕಳ್ಳ ಮಾರ್ಗದಲ್ಲಿ ಬಂದಿರುವ ಈತ ಹೋಂ ಕ್ವಾರಂಟೈನ್ನಲ್ಲಿರದೆ, ಆಟೋ ಚಾಲಕನಾಗಿರುವ ಸ್ನೇಹಿತನೊಂದಿಗೆ ತೀರ್ಥಹಳ್ಳಿಯಲ್ಲಿ ಸುತ್ತಾಡಿದ್ದ. ಜತೆಗೆ ಹಲವು ಸ್ನೇಹಿತರು, ಸಂಬಂಧಿಕರ ಮನೆಗೂ ಹೋಗಿದ್ದ. ತಾಲೂಕಿನ ಹಳ್ಳಿಯೊಂದಕ್ಕೆ ದೈವದ ಹರಕೆ ತೀರಿಸಲೂ ಹೋಗಿದ್ದ ಎನ್ನಲಾಗಿದೆ. ಈತನ ಪತ್ನಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದು, ನೂರಾರು ಕಾರ್ವಿುಕರ ಜತೆ ಕೆಲಸ ಮಾಡಿರುವುದೂ ಆತಂಕ ಹೆಚ್ಚಿಸಿದೆ.
ಲಭ್ಯ ಮಾಹಿತಿ ಪ್ರಕಾರ ಸೋಂಕಿತ ಪುಣೆಯಿಂದ ಚನ್ನಗಿರಿಗೆ ಅಕ್ಕಿ ಲಾರಿಯಲ್ಲಿ, ಅಲ್ಲಿಂದ ಶಿವಮೊಗ್ಗಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾನೆ. ಶಿವಮೊಗ್ಗದಿಂದ ಊರಿಗೆ ಸಂಬಂಧಿಕರು ಸ್ವಂತ ವಾಹನದಲ್ಲಿ ಕರೆದುಕೊಂಡು ಬಂದಿದ್ದಾರೆ. ಚನ್ನಗಿರಿಯಲ್ಲಿ ಊಟ ಮಾಡುವ ಸಂದರ್ಭ ಮುಂಬೈನಿಂದ ಬಂದಿರುವ ವಿಷಯ ತಿಳಿದ ಜನ, ಕೆಂಪು ವಲಯದಿಂದ ಬಂದಿರುವ ವ್ಯಕ್ತಿ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಊರಿಗೆ ಬಂದ ಬಳಿಕ ಆಸ್ಪತ್ರೆಗೆ ಹೋಗುವ ಬದಲು ತಾಲೂಕಿನ ದೇವಸ್ಥಾನವೊಂದಕ್ಕೆ ತೆರಳಿ, ತನಗೆ ಕರೊನಾ ಬಂದಿದೆಯಾ ಎಂದು ಪ್ರಶ್ನೆ ಕೇಳಿದ್ದ ಎಂಬುದೂ ಖಚಿತವಾಗಿದೆ. ಒಂದು ವೇಳೆ ಇವನ ಸಂಪರ್ಕಕ್ಕೆ ಬಂದಿರುವವರಲ್ಲಿ ಸೋಂಕು ದೃಢವಾದರೆ ಸಮಸ್ಯೆ ತೀವ್ರವಾಗಲಿದೆ.
ಚಿಕ್ಕಮಗಳೂರಿಗೂ ಸೋಂಕಿನ ಭಯ?: ಸೋಂಕಿತನನ್ನು ಪುಣೆಯಿಂದ ಕರೆತಂದ ಲಾರಿಯ ಚಾಲಕ ಹಾಗೂ ಕ್ಲೀನರ್ ಚಿಕ್ಕಮಗಳೂರಿನ ತರೀಕೆರೆಯವರಾಗಿದ್ದು, ಅವರನ್ನೂ ಕ್ವಾರಂಟೈನ್ ಮಾಡಲಾಗಿದೆ. ಇಬ್ಬರ ಕಫದ ಮಾದರಿ ಸಂಗ್ರಹಿಸಿ ಹಾಸನ ಲ್ಯಾಬ್ಗೆ ಕಳುಹಿಸಲಾಗಿದೆ.
ಬಾಲಕರಲ್ಲೂ ಸೋಂಕು: ಹಾಸನ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಇಬ್ಬರು ಬಾಲಕರು ಸೇರಿ ಏಳು ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ16ಕ್ಕೆ ಏರಿಕೆಯಾಗಿದೆ. ಸೋಂಕಿತರೆಲ್ಲರೂ ಮೂರು ಪ್ರತ್ಯೇಕ ಕುಟುಂಬಗಳ ಸದಸ್ಯರಾಗಿದ್ದು, ಮುಂಬೈನಿಂದ ಹಿಂದಿರುಗಿ ಪ್ರತ್ಯೇಕ ವಾಸದಲ್ಲಿದ್ದರು. ಚನ್ನರಾಯಪಟ್ಟಣ ತಾಲೂಕಿಗೆ ಮಾತ್ರ ಸೀಮಿತವಾಗಿದ್ದ ಸೋಂಕು ಈಗ ಅರಕಲಗೂಡು ಹಾಗೂ ಹೊಳೆನರಸೀಪುರ ಮೂಲದವರಿಗೂ ತಗುಲಿದೆ.