ಯುವಜನರು ದಾರಿ ತಪ್ಪಿ ನಡೆಯಬಾರದು 
ನ್ಯೂಸ್

ಯುವಜನರು ದಾರಿ ತಪ್ಪಿ ನಡೆಯಬಾರದು

ಎ. ಆರ್. ರಘುರಾಮ

ಹೊಳೆನರಸೀಪುರ : ದೇಶದ ಭಾವಿ ಪ್ರಜೆಗಳಾದ ಯುವಜನರು ಎಂದಿಗೂ ದಾರಿ ತಪ್ಪಿ ನಡೆಯಬಾರದು ಎಂದು ಪ್ರಾಂಶುಪಾಲ ದೇವರಾಜು ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಪ್ರಯುಕ್ತ ಮಂಗಳವಾರ ಆಯೋಜನೆ ಮಾಡಿದ್ದ ಪ್ರಬಂಧ, ಚಿತ್ರಕಲಾ ಸ್ಪರ್ಧೆ ಮತ್ತು ಅರಿವಿನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಭವಿಷ್ಯದ ದೃಷ್ಠಿಯಿಂದ ನಶಾ ಮುಕ್ತ ಭಾರತ ಅಭಿಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಹಿರಿಯರ ಮಾರ್ಗದರ್ಶನವನ್ನು ಅರ್ಥೈಸಿಕೊಂಡು, ಯಾವುದೇ ಚಟಕ್ಕೂ ಬಲಿಯಾಗದೇ ಯುವಜನರು ಮುನ್ನಡೆಯಬೇಕಿದೆ ಎಂದರು

ಸಾಮಾನ್ಯವಾಗಿ ವಿದ್ಯಾರ್ಥಿನಿಯರು ಯಾವುದೇ ದುಶ್ಚಟಗಳಿಗೆ ದಾಸರಾಗುವುದಿಲ್ಲ. ಇತರರು ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಅವರು ತಿಳಿ ಹೇಳುವ ಕೆಲಸ ಮಾಡಬೇಕು ಎಂದವರು ಸಲಹೆ ನೀಡಿದರು.

ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಅರಿವಿನ ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ ಸಾಗಿದರು.

ಉಪನ್ಯಾಸಕರಾದ ಸುದರ್ಶನ್, ನಿರ್ಮಲಾ, ಪವಿತ್ರಾ, ಮಮತಾ, ಅವಿನಾಶ್, ಶ್ರೀನಿವಾಸ್, ವೀಣಾ, ಕಾಂತರಾಜು, ರಾಘವೇಂದ್ರ, ಶಾಂತರಾಜು, ವಾಣಿ, ನಟರಾಜ್ ಹಾಗೂ ಅಪೂರ್ವ ಇದ್ದರು.