ಬೆಂಗಳೂರು: ಜಾಲಹಳ್ಳಿಯಲ್ಲಿ ಎಚ್‌ಎಂಟಿ ಕಂಪನಿಗೆ ಸೇರಿದ ಐದು ಎಕರೆ ವಶಕ್ಕೆ ತೆಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆ.ಪಿ.ನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಚ್‌ಎಂಟಿ ಜಮೀನು ವಶ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ರಾಜ್ಯ ಸರ್ಕಾರಕ್ಕೆ ಹಿನ್ನೆಡೆ ಆಗುವುದು ಖಚಿತ ಎಂದರು.
ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ನೂರಾರು ಎಕರೆ ಅರಣ್ಯ ಭೂಮಿ ಲೂಟಿ ಹೊಡೆದಿದ್ದಾರಲ್ಲ, ಮೊದಲು ಅದರ ಬಗ್ಗೆ ನೋಡಲಿ ಎಂದು ಅರಣ್ಯ ಈಶ್ವರ್ ಖಂಡ್ರೆ ಅವರಿಗೆ ಟಾಂಗ್ ಕೊಟ್ಟರು.
ಸರ್ಕಾರ ವಶಕ್ಕೆ ಪಡೆದಿರುವ ಬಗ್ಗೆ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನೇ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಮೊದಲು ಅದನ್ನು ನೋಡಲಿ. ಎಷ್ಟು ಎಕರೆ ಲೂಟಿ ಆಗಿದೆ ಅಲ್ಲಿ ನೋಡಲಿ. ಶುಕ್ರವಾರ ಐದು ಎಕರೆಗೆ ಬಲವಂತವಾಗಿ ಹೋಗಿ ಫೆನ್ಸಿಂಗ್ ಹಾಕಿಕೊಂಡಿದ್ದಾರೆ. ಕೋರ್ಟ್ ಆದೇಶಗಳಿಗೆ ಎಚ್‌ಎಂಟಿ ಹಾಗೂ ಅಧಿಕಾರಿಗಳು ತಲೆ ಬಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.