ನ್ಯೂಸ್

ರಕ್ಷಣಾ ಪಡೆ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್​ ಚೀಫ್ ಕಮಾಂಡರ್ ಒಬ್ಬ ಶ್ರೀನಗರ ಹೊರವಲಯದಲ್ಲಿ ಎನ್​ಕೌಂಟರ್​ಗೆ ಬಲಿಯಾಗಿದ್ದು, ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಸಿಕ್ಕಿದಂತಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಶ್ರೀನಗರದ ಓಲ್ಡ್ ಏರ್​ಫೀಲ್ಡ್ ಸಮೀಪದಲ್ಲಿರುವ ರಂಗೇರ್​ನಾಥ್​ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಕುರಿತು ಖಚಿತ ಮಾಹಿತಿ ಪಡೆದುಕೊಂಡ ರಕ್ಷಣಾ ಪಡೆ ಸಿಬ್ಬಂದಿ, ಭಾನುವಾರ ಶೋಧ ಕಾರ್ಯ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಇದರ ಪರಿಣಾಮ, ಉಗ್ರರು ಅಲ್ಲಿಂದ ಪರಾರಿಯಾಗುವ ಸಲುವಾಗಿ ಗುಂಡಿನ ದಾಳಿ ಶುರುಮಾಡಿದ್ದರಿಂದ ರಕ್ಷಣಾ ಪಡೆ ಯೋಧರು ಕೂಡ ಪ್ರತಿದಾಳಿ ಆರಂಭಿಸಿದರು.

ಈ ಪ್ರತಿದಾಳಿಯ ಸಂದರ್ಭದಲ್ಲಿ ಉಗ್ರನೊಬ್ಬ ಹತನಾದ. ಆತನನ್ನು ಸೈಫುಲ್ಲಾ ಎಂದು ಗುರುತಿಸಲಾಗಿದೆ. ಕಾಶ್ಮೀರಣ ಕಣಿವೆಯಲ್ಲಿ ಮೋಸ್ಟ್ ವಾಂಟೆಂಡ್ ಉಗ್ರನಾಗಿದ್ದ ಆತ 2014ರಲ್ಲಿ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್​ ಸೇರಿದ್ದ. ಅನೇಕ ಉಗ್ರ ದಾಳಿಗಳನ್ನು ಆಯೋಜಿಸಿದ್ದ ಆತ ಅಲ್ಲಿ ಚೀಫ್ ಕಮಾಂಡರ್​ ಸ್ತರಕ್ಕೆ ಏರಿದ್ದ. ಬುರ್ಹಾನ್ ವಾನಿ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)