ವಿಶ್ವ ಏಡ್ಸ್ ದಿನದ ನಿಮಿತ್ತ ಸಮುದಾಯಗಳು ಮುನ್ನಡೆಸಲಿ ಜಾಥಾಕ್ಕೆ ಡಿಸಿ ಡಾ. ಆರ್.ಸೆಲ್ವಮಣಿ ಚಾಲನೆ ನೀಡಿದರು. ಮಂಜುನಾಥ್ ನಾಯಕ್, ಸಿ.ಎನ್.ಚಂದನ್, ಬಿ.ಜಿ. ಶಿವಮೂರ್ತಿ, ಡಾ. ಜಿ.ಸಿ.ದಿನೇಶ್, ಡಾ. ಸಿ.ರಮೇಶ್, ಸಿದ್ಧನಗೌಡ, ರವಿಕುಮಾರ್, ವಿಜಯಕುಮಾರ್ ಇದ್ದರು. 
ನ್ಯೂಸ್

ಅರಿವು ಮೂಡಿಸಿದರಷ್ಟೇ ಎಚ್‌ಐವಿ ನಿಯಂತ್ರಣ

ನವೀನ ಬಿ.ಎಂ

ಶಿವಮೊಗ್ಗ: ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಎಚ್‌ಐವಿ ಕುರಿತಂತೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು. ಆಗ ಮಾತ್ರ ಅದನ್ನು ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿವಿಧ ಕಾಲೇಜುಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಮುದಾಯಗಳು ಮುನ್ನಡೆಸಲಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲಿ ಏಡ್ಸ್ 1986ರಲ್ಲಿ ಮೊದಲು ಕಾಣಿಸಿಕೊಂಡಿತ್ತು. 40 ಲಕ್ಷ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಇದಕ್ಕೆ ಸೂಕ್ತ ಔಷಧವನ್ನು ವೈದ್ಯ ವಿಜ್ಞಾನಿಗಳು ಕಂಡುಹಿಡಿಯಲು ಸದಾ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಮಾತನಾಡಿ, ಎಚ್‌ಐವಿ ಎಂಬ ಮಾರಕ ರೋಗದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ರೋಗಕ್ಕೆ ಪೀಡಿತರಾದವರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ನಾವು ಯಾವ ರೀತಿ ನೋಡಿಕೊಳ್ಳಬೇಕು ಎಂಬುದು ಈ ಜಾಥಾದ ಮುಖ್ಯ ಉದ್ದೇಶ. ಎಆರ್‌ಟಿ ಚಿಕಿತ್ಸೆಯನ್ನು ಪಡೆಯುವುದರಿಂದ ಜೀವನವನ್ನು ಸುಧಾರಿಸಿಕೊಳ್ಳಬಹುದು. 2023ರೊಳಗೆ ಏಡ್ಸ್‌ನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬೇಕು ಎಂದು ಹೇಳಿದರು.
ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ ಮಾತನಾಡಿ, 2023ರ ವೇಳೆಗೆ ಎಚ್‌ಐವಿ ಮತ್ತು ಏಡ್ಸ್ ಪ್ರಕರಣ ಸಂಪೂರ್ಣ ನಿಯಂತ್ರಣ ಆಗಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜ್‌ಗಳಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಅರಿವು ಮೂಡಿಸಬಹುದು. ಜಿಲ್ಲೆಯಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಲು 42 ರೆಡ್ ರಿಬ್ಬನ್ ಕ್ಲಬ್‌ಗಳು ಸ್ಥಾಪನೆಯಾಗಿವೆ ಎಂದು ಹೇಳಿದರು.
ರೋಟರಿ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿದರು. ಏಡ್ಸ್ ಕುರಿತು ಕೆಲಸ ನಿರ್ವಹಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್, ಜಿಲ್ಲಾ ನ್ಯಾಯಾವಾಧಿಗಳ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ. ಜಿ.ಸಿ.ದಿನೇಶ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸಿ.ರಮೇಶ್, ಸಿದ್ಧನಗೌಡ, ರವಿಕುಮಾರ್ ಇದ್ದರು.