ಬೆಂಗಳೂರು: ಕಿರುತೆರೆ ನಟಿ ಹಾಗೂ ಬಿಗ್ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ( divya suresh ) ಆಕ್ಸಿಡೆಂಟ್ ಮಾಡಿ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ. ಈ ಕುರಿತಾಗಿ ದಿವ್ಯಾ ಸುರೇಶ್ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ.
ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ದಿವ್ಯಾ ಸುರೇಶ್ ಅವರು ಕಾರನ್ನು ವೇಗವಾಗಿ ನಿರ್ಲಕ್ಷ್ಯದ ಚಾಲನೆ ಮಾಡಿ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಬೈಕ್ನಲ್ಲಿದ್ದ ಮೂವರು ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಈ ಘಟನೆ ನಂತರ ದಿನಾಂಕ 7ರಂದು ಬ್ಯಾಟರಾಯನಪುರ ಠಾಣೆಗೆ ಗಾಯಾಳು ಸಂಬಂಧಿ ಕಿರಣ್ ದೂರು ನೀಡಿದ್ದರು.
ದೂರುದಾರ ಕಿರಣ್ ಅವರ ಹೇಳುವ ಪ್ರಕಾರ, ಅನುಷಾಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಬೈಕ್ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ನಾಯಿಗಳು ಬೊಗಳಿವೆ. ಭಯದಿಂದ ಕಿರಣ್ ಬೈಕ್ನಲ್ಲಿ ಸ್ವಲ್ಪ ಬಲ ಬದಿಗೆ ಹೋಗಿದ್ದಾರೆ. ಈ ವೇಳೆ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಬಂದ ದಿವ್ಯಾ, ಬೈಕ್ಗೆ ಡಿಕ್ಕಿ ಹೊಡೆದು ಹಾಗೇ ಪರಾರಿಯಾಗಿದ್ದಾರೆ. ಗಾಯಾಳು ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 7 ರಂದು ಬ್ಯಾಟರಾಯನಪುರ ಠಾಣೆಯಲ್ಲಿ ಕಿರಣ್ ದೂರು ನೀಡಿದ್ದು ಸಂಚಾರಿ ಪೊಲೀಸರು ಸಿಸಿಟಿವಿ ಮೂಲಕ ಕಾರು ನಂಬರ್ ಟ್ರೇಸ್ ಮಾಡಿದ್ದಾಗ ದಿವ್ಯಾ ಸುರೇಶ್ ಮಾಡಿರುವ ಆಕ್ಸಿಡೆಂಟ್ ಗೊತ್ತಾಗಿದೆ. ದಿವ್ಯಾ ಸುರೇಶ್ ಕಾರು ಪತ್ತೆ ಮಾಡಿ ಪೊಲೀಸರು ಸೀಜ್ ಮಾಡಿದ್ದರು. ಈಗ ಪ್ರಕರಣದ ತನಿಖೆ ನಡೆಯುತ್ತಿದೆ.