ನ್ಯೂಸ್

ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ; ಅಪಘಾತ ಮಾಡಿ ವ್ಯಕ್ತಿಯ ಜೀವವನ್ನೇ ತೆಗೆದ ಮಹಿಳೆ

Bengaluru - General - Rama Kishan K V

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹಿಟ್​ ಆ್ಯಂಡ್​ ರನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಮಹಿಳೆಯೊಬ್ಬಳು ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾಳೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಸಂಜಯ್ ಬಾಬು ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ.

ಸಂಜಯ್ ಬಾಬು ಎಂಬುವವರು ಮಗ ವೇದಾಂತ್​ನೊಂದಿಗೆ ತಂದೆಯನ್ನು ನೋಡಲು ಸ್ಕೂಟರ್​ನಲ್ಲಿ ದಾಸರಹಳ್ಳಿ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ವೇಗದಿಂದ ಮತ್ತು ಅಜಾಗರೂಕತೆಯಿಂದ ಬಂದ ವ್ಯಾಗನಾರ್ ಕಾರು ಡಿಕ್ಕಿ ಹೊಡೆದಿದ್ದು, ತಂದೆ ಮತ್ತು ಮಗ ಸ್ಕೂಟರ್​ನಲ್ಲಿ ಕೆಳಕ್ಕೆ ಬಿದ್ದಿದ್ದಾರೆ. ಅಪಘಾತದಿಂದ ಸ್ಕೂಟರ್ ಸವಾರ ಸಂಜಯ್ ಬಾಬು ಅವರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿತ್ತು.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ತಂದೆ ಮತ್ತು ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ಆಗಬೇಕೆಂದು ಹೇಳಿದ್ದರು. ಇದೀಗ ಶಸ್ತ್ರ ಚಿಕಿತ್ಸೆ ಬಳಿಕವೂ ಸ್ಕೂಟರ್ ಸವಾರ ಸಂಜಯ್ ಬಾಬು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸಂಜಯ್ ಬಾಬು ಅವರ ಮಗ ವೇದಾಂತ್​ಗೂ ಗಂಭೀರ ಗಾಯವಾಗಿದ್ದು, ಬಲಕೈಯ 4 ರಿಬ್ಸ್ ಮುರಿದಿದ್ದು, ಎಡಗೈ ಭುಜದ ಮೂಳೆ ಮುರಿತಕ್ಕೊಳಗಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಸಂಚಾರಿ ಪೊಲೀಸರು ಕಾರಿನ ಚಾಲಕಿ ಶುಭ ಎಂಬಾಕೆಯನ್ನು ಬಂಧಿಸಿದ್ದಾರೆ.