ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ಬೆಳೆಕಿಗೆ ಬಂದಿದೆ. ನಾಸಿಕ್‌ನಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ನಾಸಿಕ್‌ನಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ದೃಶ್ಯ ಸಮೀಪವಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಮದ್ಯದ ಅಮಲಿನಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನಾಸಿಕ್‌ನ ಬರ್ದನ್ ಫಾಟಾ ಪ್ರದೇಶದಲ್ಲಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತ ನಡೆದ ಕೆಲವೇ ಗಂಟೆಗಳಲ್ಲಿ ಗಂಗಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಆರೋಪಿ ಘಟನೆ ನಡೆದಾಗ ಮದ್ಯ ಸೇವಿಸಿದ್ದ ಎಂದು ತಿಳಿದುಬಂದಿದೆ. ಆರೋಪಿಗಳು ಮದ್ಯದ ಅಮಲಿನಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಗೆ ಕಾರಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅರ್ಚನಾ ಶಿಂಧೆ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಹಿಟ್ ಅಂಡ್ ರನ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಅಪಘಾತದ ಮೊದಲು ಎದುರಿನಿಂದ ಬಂದ ಇಬ್ಬರು ಯುವಕರು ಮಹಿಳೆಯ ಕಡೆಗೆ ಕಾರು ಹೋಗುತ್ತಿರುವುದನ್ನು ಕಂಡು ಚಾಲಕನಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸುತ್ತಾರೆ. ಆದರೆ ಕಾರೂ ಚಾಲಕ ವೇಗ ಕಡಿಮೆ ಮಾಡದೇ ಡಿಕ್ಕಿ ಹೊಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ.
ನಾಸಿಕ್‌ನ ಗಂಗಾಪುರ ರಸ್ತೆ ಮತ್ತು ಕಾಲೇಜು ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸೋಮವಾರ 45 ವರ್ಷದ ಮಹಿಳೆಯನ್ನು ಟ್ರಕ್ ಡಿಕ್ಕಿ ಹೊಡದು ಅವರು ಮೃತಪಟ್ಟಿದ್ದರು. ಮುಂಬೈನ ವರ್ಲಿ ಪ್ರದೇಶದಲ್ಲಿ ಭಾನುವಾರ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಿಎಂಡಬ್ಲ್ಯು ಕಾರೊಂದು ಡಿಕ್ಕಿ ಹೊಡೆದು 1.5 ಕಿಮೀ ಎಳೆದೊಯ್ದ ನಂತರ ಮಹಿಳೆಯು ಮೃತಪಟ್ಟಿದ್ದರು. ಇದಲ್ಲದೆ ಇನ್ನೇರಡು ಹಿಟ್ ಆ್ಯಂಡ್ ರನ್ ಪ್ರಕರಣಗಳು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದಿದ್ದವು. ಇಂತಹ ಪ್ರಕರಣಗಳ ಬಗ್ಗೆ ಸಿಎಂ ಏಕನಾಥ್ ಶಿಂಧೆ ಆತಂಕ ವ್ಯಕ್ತಪಡಿಸಿ, ಅಪಘಾತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದರು. ಇದೀಗ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)