ಬೆಂಗಳೂರು: ದೇಶದ ಇತಿಹಾಸದಲ್ಲಿ ರೈತರಿಗೆ, ಬಡವರಿಗೆ ಮತ್ತು ಹಳ್ಳಿಗಳಿಗೆ ಇಷ್ಟೊಂದು ಆದ್ಯತೆ ನೀಡಿದ ಆಯವ್ಯಯ ಎಂದೂ ಬಂದಿಲ್ಲ. 2022ರಲ್ಲಿ ರೈತರ ಆದಾಯ ದ್ವಿಗುಣ ಮಾಡುವ ಗುರಿ ಸಾಧನೆಗೆ ಈ ಆಯವ್ಯಯದಲ್ಲಿ ಘೊಷಿಸಿರುವ ಕಾರ್ಯಕ್ರಮಗಳು ಪೂರಕವಾಗಿವೆ. 100 ಜಲಕ್ಷಾಮ ಜಿಲ್ಲೆಗಳಲ್ಲಿ ವಿಶೇಷ ಯೋಜನೆ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಸ್ವಾವಲಂಬನೆ ನಿಟ್ಟಿನಲ್ಲಿ ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ, 20 ಲಕ್ಷ ರೈತರಿಗೆ ಸೌರ ಪಂಪ್ಸೆಟ್ ಒದಗಿಸಲು ನೆರವು, ಜಮೀನುಗಳಲ್ಲಿ ರೈತರು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡುವುದು ಮೊದಲಾದ ಕಾರ್ಯಕ್ರಮಗಳು ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಿವೆ. ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ರಫ್ತು ಮಾಡಲು ಕಿಸಾನ್ ರೈಲು, ಕಿಸಾನ್ ಉಡಾನ್ ಯೋಜನೆ ಸಹಾಯಕವಾಗಲಿದೆ ಎಂದು ತಿಳಿಸಿದರು.
2.83 ಲಕ್ಷ ಕೋಟಿ ರೂ. ಮೊತ್ತದ ಬಜೆಟ್. ಕ್ಷಯರೋಗ ನಿವಾರಣೆ, ಜನ ಔಷಧ ಕೇಂದ್ರಗಳ ವಿಸ್ತರಣೆ, ಆರೋಗ್ಯ ಸೇವೆ ಸುಧಾರಣೆಗೆ ಆದ್ಯತೆ, ವೈದ್ಯಕೀಯ ಶಿಕ್ಷಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯ. ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ, ವಿದೇಶಿ ಸಾಲ ಪಡೆಯಲು ಅನುಮತಿ ದೊರೆತಿರುವುದು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನುಕೂಲವಾಗಲಿದೆ. ಆನ್ಲೈನ್ ಶಿಕ್ಷಣ ವ್ಯವಸ್ಥೆ ಘೊಷಿಸಿರುವುದು ಮಹತ್ವಪೂರ್ಣ ಬೆಳವಣಿಗೆ. ಕೌಶಲಾಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಜನೆಗೆ ಪೂರಕ ಆಯವ್ಯಯ ಇದಾಗಿದ್ದು, ಮಾನವ ಸಂಪನ್ಮೂಲ ಬಳಕೆಗೆ ಉತ್ತೇಜನಕಾರಿಯಾಗಿದೆ. ಉತ್ಪಾದನಾ ವಲಯ, ರಫ್ತಿಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ ಎಂದರು.
ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಒದಗಿಸಿರುವುದು ಹೂಡಿಕೆದಾರರಿಗೆ ಉತ್ತಮ ಸಂದೇಶ ನೀಡಿದೆ. 18600 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು ಸಬರ್ಬನ್ ರೈಲಿಗೆ ಅನುಮೋದನೆ ನೀಡಿದ್ದು. ಭಾರತ ಸರ್ಕಾರದ ಶೇ. 20 ಪಾಲು, ರಾಜ್ಯ ಸರ್ಕಾರದ ಶೇ.20 ಪಾಲು ಹಾಗೂ ಶೇ. 60 ರ ಬಾಹ್ಯ ನೆರವಿನ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದ್ದು, ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲವಾಗಿದೆ. ಆದಾಯ ತೆರಿಗೆ ಹಾಗೂ ಕಾರ್ಪೆರೇಟ್ ತೆರಿಗೆ ಇಳಿಕೆ, ತೆರಿಗೆದಾರರಿಗೆ ಕಿರುಕುಳ ತಡೆಯುವ ನಿಟ್ಟಿನಲ್ಲಿ (ಟ್ಯಾಕ್ಸ್ ಪೇಯರ್ ಚಾರ್ಟ್ರ್) ಕೇಂದ್ರದ ಮಹತ್ವಪೂರ್ಣ ಕ್ರಮಗಳಾಗಿವೆ. ರಾಷ್ಟ್ರೀಯ ನೇಮಕಾತಿ ಸಂಸ್ಥೆ ಪ್ರಾರಂಭಿಸುವ ಮೂಲಕ ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಯನ್ನು ಸರಳಗೊಳಿಸುವ ತೀರ್ವನವೂ ಸ್ವಾಗತಾರ್ಹ ಎಂದರು.