ಸಾಗರ ನಗರಸಭೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಧುಮಾಲತಿ, ಸೈಯದ್ ಜಾಕೀರ್ ಇತರರಿದ್ದರು. 
ನ್ಯೂಸ್

ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಿ

ಶಿವಕುಮಾರ ಎಸ್.ಪಿ.

ಸಾಗರ: ದೀಪಾವಳಿ ಸಮೀಪಿಸಿರುವುದರಿಂದ ನಗರವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ಸಾಗರ ನಗರಸಭೆಗೆ ಬುಧವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಸ್ವಚ್ಛತೆಗೆ ಸಂಬಂಧಿಸಿ ನಾಗರಿಕರಿಂದ ಯಾವುದೇ ದೂರು ಬರಬಾರದು. ನಿರ್ಲಕ್ಷೃ ತೋರಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಿಟ್ಟೂಬಿಡದೆ ಮಳೆ ಬರುತ್ತಿರುವುದರಿಂದ ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ನಿಲ್ಲುವವರೆಗೆ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಿ. ಮಳೆ ಕಡಿಮೆಯಾದ ನಂತರ ನಗರೋತ್ಥಾನ ಯೋಜನೆಯಡಿ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಬೇಕು. ಸ್ವಚ್ಛತಾ ಕಾರ್ಯಕ್ಕೆ ಹೆಚ್ಚುವರಿಯಾಗಿ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವಂತೆ ಸಲಹೆ ನೀಡಿದರು.
ಹೆಚ್ಚುವರಿ ಜನರನ್ನು ಕೆಲಸಕ್ಕೆ ತೆಗೆದುಕೊಂಡರೆ ಅನುಕೂಲ. ಆದರೆ ಇತರೆ ಕಾರ್ಮಿಕರು ಕೆಲಸ ಮಾಡದೆ ಕುಳಿತುಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಪೌರಾಯುಕ್ತರು ಗಮನ ಹರಿಸಬೇಕು. ಮಾತು ಕೇಳದ ಅಧಿಕಾರಿಗಳು, ಸಿಬ್ಬಂದಿಗೆ ನೋಟಿಸ್ ನೀಡಿ ಎಂದು ಸೂಚಿಸಿದರು.
ಕಳೆದ ಬಾರಿ ಆಶ್ರಯ ನಿವೇಶನ ಕೋರಿ ನಾಲ್ಕು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ನಮ್ಮ ಬಳಿ ಅಷ್ಟೊಂದು ನಿವೇಶನ ಇಲ್ಲ. ಸುಮಾರು ಎರಡು ಸಾವಿರ ನಿವೇಶನ ಇರಬಹುದು. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಸದ್ಯದಲ್ಲೇ ನಗರ ಆಶ್ರಯ ಸಮಿತಿ ರಚಿಸಲಾಗುತ್ತದೆ ಎಂದು ಹೇಳಿದರು.
ನಗರಸಭೆ ಸದಸ್ಯರಾದ ಮಧುಮಾಲತಿ, ಎನ್.ಲಲಿತಮ್ಮ, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಎಲ್.ಚಂದ್ರಪ್ಪ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪರಿಸರ ವಿಭಾಗದ ಮದನ್ ಇತರರಿದ್ದರು.