ನ್ಯೂಸ್

‘ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ’

ಮೈಸೂರು: ಸ್ವರಸಂಕುಲ ಸಂಗೀತ ಸಭಾ ವತಿಯಿಂದ ಸೆ.22ರಂದು ಸಂಜೆ 6 ಗಂಟೆಗೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಪಂಡಿತ್ ವೀರಭದ್ರಯ್ಯ ಹಿರೇಮಠ ಅವರ ‘ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
ವೀರಭದ್ರಯ್ಯ ಹಿರೇಮಠ ಅವರಿಗೆ ಹಾರ್ಮೋನಿಯಂನಲ್ಲಿ ಪಂಡಿತ್ ಶ್ರೀರಾಮ್ ಭಟ್ ಮತ್ತು ತಬಲಾದಲ್ಲಿ ಪಂಡಿತ್ ರಮೇಶ್ ಧನ್ನೂರ್ ಸಹಕಾರ ನೀಡಲಿದ್ದಾರೆ.
ಪಂ.ವೀರಭದ್ರಯ್ಯ ಹಿರೇಮಠ ಅವರು ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ ಮತ್ತು ವಚನ ಗಾಯನದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ 15 ವರ್ಷ ಕಲಿತು, ನಂತರ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮೈಸೂರಿನಲ್ಲಿ 1993ರಿಂದ ನೆಲೆಸಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನೆಲೆಯೂರಲು ಶ್ರಮಿಸಿದ್ದಾರೆ. ಸ್ವರಸಂಕುಲ ಸಂಗೀತ ಸಭಾ ಕಾರ್ಯದರ್ಶಿಯಾಗಿ ನಿಯಮಿತವಾಗಿ ದೇಶದ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಸ್ವರಸಂಕುಲ ಸಂಗೀತ ಶಾಲೆ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಹಿಂದುಸ್ತಾನಿ ಹಾಡುಗಾರಿಕೆ ಮತ್ತು ಹಾರ್ಮೋನಿಯಂ ಕಲಿಸುತ್ತಿದ್ದಾರೆ. ಪ್ರಸ್ತುತ ಪಂಡಿತ್ ಇಂದೂಧರ ನಿರೋಡಿ ಅವರ ಬಳಿ ಸಂಗೀತಾಭ್ಯಾಸ ಮುಂದುವರಿಸಿದ್ದಾರೆ.