ನ್ಯೂಸ್

ಬಾಂಗ್ಲಾದೇಶದಲ್ಲಿ ಮತ್ತೆ ಹಿಂದು ದೇಗುಲಗಳ ಮೇಲೆ ದಾಳಿ; ಮುಂದುವರಿದ ಹಿಂಸಾಚಾರ

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದುಗಳ ವಿರುದ್ಧದ ಅಸಹನೆ ಮುಂದುವರಿದಿದ್ದು, ಕಿಡಿಗೇಡಿ ಗುಂಪೊಂದು ಚಟ್ಟೋಗ್ರಾಮ್ಲ್ಲಿರುವ ಮೂರು ಹಿಂದು ದೇವಾಲಯಗಳ ಮೇಲೆ ದಾಳಿ ಮಾಡಿದೆ. ಅಲ್ಲಿ ಮಾಜಿ ಇಸ್ಕಾನ್ ಸದಸ್ಯರೊಬ್ಬರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ದೂರನ್ನೂ ದಾಖಲಿಸಲಾಗಿದ್ದು, ಹಿಂಸಾಚಾರ ಕೂಡ ಭುಗಿಲೆದ್ದಿದೆ. ಬಂದರು ನಗರ ಚಟ್ಟೋಗ್ರಾಮ್ ಹರೀಶ್​ಚಂದ್ರ ಮುನ್ಸೆಫ್ ಲೇನ್​ನಲ್ಲಿ ಮಧ್ಯಾಹ್ನ 2.30ರ ವೇಳೆಗೆ ಶಾಂತನೇಶ್ವರಿ ಮಾತ್ರಿ ದೇವಸ್ಥಾನ, ಶನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಳಿಬರಿ ದೇವಸ್ಥಾನ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಕೆಲ ಪ್ರತಿಭಟನಾಕಾರರು ಇಟ್ಟಿಗೆಯ ಬ್ಯಾಟ್​ಗಳಿಂದ ದಾಳಿ ಮಾಡಿದ್ದಾರೆ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ಮಯ ಕೃಷ್ಣ ಅವರ ಜಾಮೀನು ನಿರಾಕರಿಸಿದ್ದರಿಂದ ಚಟ್ಟೋಗ್ರಾಮ್ಲ್ಲಿ ಉಂಟಾದ ಅಶಾಂತಿ, ಸಂಘರ್ಷಗಳಿಂದಾಗಿ ವಕೀಲ ಸೈಫುಲ್ ಇಸ್ಲಾಂ ಅಲಿಫ್​ಸಾವಿಗೀಡಾಗಿದ್ದರು. ಇಸ್ಕಾನ್ ಸದಸ್ಯರು ಮಸೀದಿಗಳಿಗೆ ಹಾನಿ ಮಾಡಿದ್ದಾರೆ ಮತ್ತು ವಕೀಲ ಸೈಫುಲ್ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಹೆಫಾಜತ್ ಬೆಂಬಲಿಗರು ಕಿಡಿಕಾರಿದ್ದಾರೆ. ವಕೀಲರ ಹತ್ಯೆ ಸಂಬಂಧ 9 ಜನರನ್ನು ಬಂಧಿಸಲಾಗಿದೆ.

ಪೊಲೀಸರ ವಶದಲ್ಲಿ ಶ್ಯಾಮದಾಸ ಪ್ರಭು: ಚಿನ್ಮಯ ಕೃಷ್ಣದಾಸ ಪ್ರಭು ಅವರನ್ನು ಜೈಲಿಗೆ ಹಾಕಿದ ಬೆನ್ನಿಗೇ ಬಾಂಗ್ಲಾದೇಶದ ಚಟ್ಟೋಗ್ರಾಮ್ಲ್ಲಿ ಇನ್ನೊಬ್ಬರು ಹಿಂದು ಸ್ವಾಮೀಜಿ ಶ್ಯಾಮದಾಸ ಪ್ರಭು ಅವರನ್ನು ಬಂಧಿಸಲಾಗಿದೆ. ಯಾವುದೇ ಅಧಿಕೃತ ವಾರಂಟ್ ಇಲ್ಲದೆ ಅವರನ್ನು ಬಂಧಿಸಲಾಗಿದೆ. ಶ್ಯಾಮದಾಸ ಅವರು ಬಂಧಿತ ಚಿನ್ಮಯ ಕೃಷ್ಣದಾಸ ಅವರನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದರು ಎನ್ನಲಾಗಿದೆ.

ರಕ್ಷಣೆ ಬಾಂಗ್ಲಾ ಸರ್ಕಾರದ ಜವಾಬ್ದಾರಿ: ಬಾಂಗ್ಲಾ ಸರ್ಕಾರ ಎಲ್ಲ ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಅಲ್ಪಸಂಖ್ಯಾತರು ಸೇರಿ ಎಲ್ಲ ನಾಗರಿಕರ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ಢಾಕಾದ ಪ್ರಾಥಮಿಕ ಜವಾಬ್ದಾರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸಂಸತ್ತಿಗೆ ತಿಳಿಸಿದ್ದಾರೆ.

ಬಾಂಗ್ಲಾದೇಶಿಗರಿಗೆ ಚಿಕಿತ್ಸೆ ನೀಡಲ್ಲ: ತ್ರಿಪುರದ ಅಗರ್ತಲದಲ್ಲಿನ ಐಎಲ್​ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಾಂಗ್ಲಾದೇಶದ ಪ್ರಜೆಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಘೋಷಿಸಿದೆ. ಬಾಂಗ್ಲಾದೇಶೀಯರಿಗೆ ಚಿಕಿತ್ಸೆ ನೀಡದಿರುವ ಕುರಿತ ಬೇಡಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಅಖೌರ್ ಚೆಕ್​ಪೋಸ್ಟ್​ನ ಹೆಲ್ಪ್​ಡೆಸ್ಕ್ ಮತ್ತು ಐಎಲ್​ಎಸ್ ಹಾಸ್ಪಿಟಲ್ಸ್ ಇಂದಿನಿಂದ ಮುಚ್ಚಿರಲಿದೆ ಎಂದು ಆಸ್ಪತ್ರೆಯ ಸಿಒಒ ಗೌತಮ್ ಹಜಾರಿಕ ತಿಳಿಸಿದ್ದಾರೆ.

ಬಾಂಗ್ಲಾ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಪಶ್ಚಿಮ ಬಂಗಾಳದ ಕೋಲ್ಕತದ ಮಾಣಿಕ್ತಲಾ ಪ್ರದೇಶದ ಆಸ್ಪತ್ರೆಯೊಂದು ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದೆ. ಬಾಂಗ್ಲಾದೇಶದ ನಾಗರಿಕರು ಭಾರತೀಯ ಧ್ವಜಕ್ಕೆ ಅಗೌರವ ತೋರಿದ ಘಟನೆಗಳಿಂದ ಈ ನಿರ್ಧಾರಕ್ಕೆ ಬರಲಾಗಿದೆ ಜೆಎನ್ ರೇ ಆಸ್ಪತ್ರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನಿರ್ದಿಷ್ಟ ಸಮಯದವರೆಗೆ ನಾವು ಯಾವುದೇ ಬಾಂಗ್ಲಾದೇಶದ ರೋಗಿಗಳನ್ನು ಚಿಕಿತ್ಸೆಗೆ ಸೇರಿಸಿಕೊಳ್ಳುವುದಿಲ್ಲ. ಭಾರತಕ್ಕೆ ಅವಮಾನ ಮಾಡಿದ್ದಕ್ಕಾಗಿ ಈ ಕ್ರಮ ಎಂದು ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ್ ಹೇಳಿದ್ದಾರೆ.