ಲಖನೌ: ಭಾರತದ ಪುರಾತತ್ವ ಸಮೀಕ್ಷೆ (ASI) ಶುಕ್ರವಾರ ವಾರಾಣಸಿಯಲ್ಲಿ ಹಿಂದೂ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಪುನರಾರಂಭಿಸಿತ್ತು. ASI ತಂಡ ಈ ಸಂದರ್ಭ ತ್ರಿಶೂಲ, ಸ್ವಸ್ತಿಕ ಚಿಹ್ನೆ, ಗಂಟೆ ಮತ್ತು ಹೂವಿನಂತಹ ಚಿಹ್ನೆಗಳ ಕೆತ್ತನೆಯನ್ನು ವಿಡಿಯೋಗ್ರಫಿ ಮತ್ತು ಛಾಯಾಗ್ರಹಣದ ಮೂಲಕ ದಾಖಲಿಸಿಕೊಳ್ಳಲಾಗಿದೆ. ಜ್ಞಾನವಾಪಿ ಸಂಕೀರ್ಣದ ಗೋಡೆಗಳು ಮತ್ತು ಸ್ತಂಭಗಳ ಮೇಲೆ ಈ ಚಿಹ್ನೆಗಳನ್ನು ಕೆತ್ತಲಾಗಿದೆ ಎನ್ನಲಾಗಿದೆ.
ಮೊದಲ ದಿನ, ಗೋಡೆಗಳು, ಗುಮ್ಮಟಗಳು ಮತ್ತು ಸ್ತಂಭಗಳ ಚಿಹ್ನೆಗಳನ್ನು ಸಮೀಕ್ಷೆ ಮಾಡಲಾಯಿತು. ಜ್ಞಾನವಾಪಿ ಸಂಕೀರ್ಣದ ನಿರ್ಮಾಣ ಶೈಲಿ ಮತ್ತು ವಿನ್ಯಾಸದ ಪ್ರಾಚೀನತೆಯನ್ನು ದಾಖಲಿಸಲಾಗಿದ್ದು ಸಮೀಕ್ಷೆಯು ವಿವಾದಿತ ರಚನೆಯ ಗುಮ್ಮಟಗಳು ಮತ್ತು ಸ್ತಂಭಗಳ ಮೇಲೆ ಸುತ್ತುವರೆದಿರುವ ರಚನೆಗಳನ್ನು ಒಳಗೊಂಡಿದೆ. ಜ್ಞಾನವಾಪಿ ಸಂಕೀರ್ಣದ ಬಳಿ ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ಜಿಲ್ಲಾ ಅಧಿಕಾರಿಗಳು ನಿಯೋಜಿಸಿದ್ದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ಕೋರ್ಟ್ನಿಂದ ಗ್ರೀನ್ ಸಿಗ್ನಲ್: ಅಂಜುಮನ್ ಸಮಿತಿ ಅರ್ಜಿ ವಜಾ
ಮೊದಲ ದಿನ, ಸಮೀಕ್ಷೆಯು ಸುಮಾರು ಏಳು ಗಂಟೆಗಳ ಕಾಲ ನಡೆಯಿತು, ಈ ಸಮಯದಲ್ಲಿ ಎಎಸ್ಐ ರಚನೆಗಳ ವಿನ್ಯಾಸ ಮತ್ತು ಚಿತ್ರಗಳನ್ನು ಸೆರೆಹಿಡಿದಿದೆ. ಡಯಲ್ ಪರೀಕ್ಷಾ ಸೂಚಕಗಳನ್ನು ಗಯಾನ್ವಾಪಿ ಸಂಕೀರ್ಣದ ನಾಲ್ಕು ಮೂಲೆಗಳಲ್ಲಿ ಇರಿಸಲಾಗಿತ್ತು ಮತ್ತು ಸಂಕೀರ್ಣದ ವಿವಿಧ ಭಾಗಗಳ ಆಳ ಮತ್ತು ಎತ್ತರವನ್ನು ಅಳೆಯಲಾಯಿತು.
ಎಎಸ್ಐ ತಂಡವು 37 ವ್ಯಕ್ತಿಗಳನ್ನು ಒಳಗೊಂಡಿದ್ದು, ಐಐಟಿಯ ತಜ್ಞರ ತಂಡವನ್ನೂ ಸೇರಿಸಿದಾಗ, ಒಟ್ಟು 41 ಸದಸ್ಯರು ಈ ಸಮೀಕ್ಷೆಯ ಭಾಗವಾಗಿದ್ದಾರೆ. ಸಮೀಕ್ಷೆಯನ್ನು ನಡೆಸಲು 41 ಜನರನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದೆ.
ಎರಡನೇ ದಿನವಾದ ಶನಿವಾರವೂ ಸಮೀಕ್ಷೆಯು ಶುರುವಾಗಿದ್ದು, ಮಸೀದಿಯ ಕಡೆಯವರು ಸಮೀಕ್ಷೆಗೆ ಸಹಕರಿಸುತ್ತಾರೆ ಎಂದು ಹೇಳಲಾಗಿದೆ. ಸಮೀಕ್ಷೆಯು ಇಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿದ್ದು ಮಧ್ಯಾಹ್ನ 12.30 ರವರೆಗೆ ಮುಂದುವರಿಯುತ್ತದೆ. ನಂತರ ಮಧ್ಯಾಹ್ನ 2.30 ರಿಂದ ಪುನರಾರಂಭಗೊಂಡು ಸಂಜೆ 5ರವರೆಗೆ ಮುಂದುವರಿಯುತ್ತದೆ.
"ಎಎಸ್ಐ ನಿನ್ನೆ ವಿಡಿಯೋಗ್ರಫಿಯನ್ನು ಮಾಡಿದ್ದು ಸಂಕೀರ್ಣದ ಭೂಗತ ಭಾಗಗಳ ಸಮೀಕ್ಷೆಯನ್ನು (ನೆಲಮಾಳಿಗೆ) ಇಂದು ನಡೆಸುವ ಸಾಧ್ಯತೆಗಳಿವೆ. ಮಸೀದಿ ಸಂಕೀರ್ಭದ ಮೇಲೆ ವಿವಿಧ ಚಿಹ್ನೆಗಳನ್ನು ನೋಡಬಹುದಾಗಿದ್ದು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಮೂಲಕ, ನೆಲದ ಒಳಗೆ ಇರುವ ಎಲ್ಲಾ ವಿಗ್ರಹಗಳನ್ನು ಕಂಡುಹಿಡಿಯಬಹುದು" ಎಂದು ಅರ್ಜಿದಾರರಲ್ಲಿ ಒಬ್ಬರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. (ಏಜೆನ್ಸೀಸ್)