ನ್ಯೂಸ್

ಗೋಮೂತ್ರ ಮತ್ತು ಸಗಣಿಯಿಂದ ಕೊರೊನಾ ದೂರವಾಗುತ್ತೆ ಎಂದ ಹಿಂದೂ ಮಹಾಸಭಾ ನಾಯಕ

ನವದೆಹಲಿ: ಕೊರೊನಾ ಭಯಕ್ಕೆ ಪ್ರಪಂಚವೇ ತತ್ತರಿಸಿದೆ. ಹೀಗಿದ್ದಾಗ ಗೋ ಮೂತ್ರ ಮತ್ತು ಸಗಣಿ ಸೇವನೆ ಮಾಡಿದರೆ ಕೊರೊನಾ ಕಾಟದಿಂದ ತಪ್ಪಿಕೊಳ್ಳಬಹುದು ಎಂದು ಹಿಂದೂ ಮಹಾಸಭಾ ವೇದಿಕೆಯ ಮುಖಂಡರೊಬ್ಬರು ಹೇಳಿದ್ದಾರೆ.

"ಗೋಮೂತ್ರ ಸೇವಿಸುವುದರಿಂದ ಮತ್ತು ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಜನರು ಕೊರೊನಾ ವೈರಸ್​ ತಮ್ಮ ದೇಹದೊಳಗೆ ಸೇರದಂತೆ ನೋಡಿಕೊಳ್ಳಬಹುದು. ಗೋವಿನ ಮೂತ್ರ ಅನೇಕ ಖಾಯಿಲೆಗಳಿಗೆ ಔಷಧವಿದ್ದಂತೆ." ಎಂದು ಹಿಂದೂ ಮಹಾಸಭಾ ವೇದಿಕೆಯ ಮುಖಂಡ ಸ್ವಾಮಿ ಚಕ್ರಪಾಣಿ ಮಹಾರಾಜ್​ ತಿಳಿಸಿದ್ದಾರೆ.

ಗೋವಿನ ಬಗ್ಗೆ ಮಾತನಾಡಿರುವ ಅವರು, ಗೋಮೂತ್ರ ಔಷಧವೆಂದ ಮಾತ್ರಕ್ಕೆ ಯಾವ್ಯಾವುದೋ ಗೋವಿನ ಮೂತ್ರ ಸೇವಿಸಿದರೆ ಉಪಯೋಗವಿಲ್ಲ. ಬೀದಿಗಳಲ್ಲಿ ಬಿಡಾಡಿ ದನಗಳಾಗಿ ತಿರುಗುವ ದನಗಳ ಗೋಮೂತ್ರದಿಂದ ಉಪಯೋಗವಿಲ್ಲ ಎಂದು ನುಡಿದಿದ್ದಾರೆ. ಸೂಕ್ತ ರೀತಿಯಲ್ಲಿ ಸಾಕಿದ ಗೋವಿನ ಮೂತ್ರದಿಂದ ಕ್ಯಾನ್ಸರ್​ನಂತಹ ಕಾಯಿಲೆಯನ್ನು ಸಹ ಗುಣಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್​ ಚೀನಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಇದುವರೆಗು 425 ಜನರು ಈ ವೈರಸ್​ನಿಂದಾಗಿ ಮೃತ ಪಟ್ಟಿರುವುದಾಗಿ ವರದಿಯಾಗಿದೆ. 19,550ಕ್ಕೂ ಹೆಚ್ಚು ಜನರಲ್ಲಿ ವೈರಸ್​ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. (ಏಜೆನ್ಸೀಸ್​)