ಮೀರತ್: ಅಖಿಲ ಭಾರತ ಹಿಂದೂ ಮಹಾಸಭಾವು 1948 ರಲ್ಲಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಗೆ(Nathuram Godse) ಸನ್ಮಾನ ಸಮಾರಂಭವನ್ನು ಮೀರತ್ನಲ್ಲಿ ಗುರುವಾರ ಆಯೋಜಿಸಿತ್ತು ಎಂದು ವರದಿಯಾಗಿದೆ.
'ಅಮರ್ ಹುತಾತ್ಮ ನಾಥೂರಾಂ ಗೋಡ್ಸೆ ಮತ್ತು ನಾನಾ ಆಪ್ಟೆ ಧಾಮ್' ಹೆಸರಿನ ಕಾರ್ಯಕ್ರಮ(ಸಭೆ) ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಗಾಂಧಿಜೀಯನ್ನು ಕೊಲೆ ಮಾಡಿದ್ದಕ್ಕಾಗಿ ನಾಥೂರಾಂ ಗೋಡ್ಸೆಯನ್ನ ಹಿಂದು ಮಹಾಸಭಾ ಸದಸ್ಯರು ಹೊಗಳಿರುವ ವಿವಾದಾತ್ಮಕ ಘಟನೆ ನಡೆದಿದೆ ಎಂದು ವರದಿ ಉಲ್ಲೇಖ ಮಾಡಲಾಗಿದೆ.
ಮಹಾಸಭಾದ ಪ್ರಮುಖ ನಾಯಕರಾದ ಪಂಡಿತ್ ಅಶೋಕ್ ಶರ್ಮಾ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಹವನ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳು ನಡೆದವು. ಭಾರತದಿಂದ 'ಗಾಂಧಿಸಂ'(ಗಾಂಧಿವಾದ) ಅನ್ನು ತೊಡೆದುಹಾಕುವುದು ಇದರ ಉದ್ದೇಶವಾಗಿತ್ತು ಎಂದು ವರದಿಯಾಗಿದೆ.
'ರಾಷ್ಟ್ರಪಿತ' ಎಂಬ ಗಾಂಧಿಯವರ ಬಿರುದನ್ನು ರದ್ದುಗೊಳಿಸುವಂತೆ ಶರ್ಮಾ ಭಾರತ ಸರ್ಕಾರವನ್ನು ಒತ್ತಾಯಿಸಿದರು. ಗೋಡ್ಸೆ ಮತ್ತು ಆಪ್ಟೆ ಅವರ ಕುಟುಂಬಗಳನ್ನು ಗೌರವಿಸುವ ಘೋಷಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿದೆ.(ಏಜೆನ್ಸೀಸ್)