ಹಿಂದು ಹಾಗೂ ಜೈನ ಧರ್ಮಗಳು ಎರಡು ಸಹೋದರ ಧರ್ಮಗಳಂತೆ ಸನಾತನ ಧರ್ಮಗಳೆಂದು ಜನಜನಿತವಾಗಿವೆ. ಇವು ಪ್ರತ್ಯೇಕ ಧರ್ಮಗಳಾದರೂ ಸಾವಿರಾರು ವರ್ಷಗಳಿಂದ ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಸಾಮರಸ್ಯದಿಂದಿವೆ. ಈ ವಿಚಾರದಲ್ಲಿ ಇಂತಹ ಇನ್ನೊಂದು ನಿದರ್ಶನ ಜಗತ್ತಿನಲ್ಲಿ ಸಿಗಲು ಸಾಧ್ಯವಿಲ್ಲ. ಈ ಒಗ್ಗಟ್ಟಿನ ಕಾರಣದಿಂದಲೇ ಜೈನಧರ್ಮ ಇಂದಿಗೂ ವಿಶಾಲ ವೈದಿಕ ಧರ್ಮದ ಜೊತೆ ನಿಲ್ಲಲು ಸಾಧ್ಯವಾಗಿದೆ. ಈ ಅನ್ಯೋನ್ಯತೆ ಎಂಥದ್ದು ಎಂಬುದನ್ನು ತಿಳಿಯಬೇಕಾದರೆ ಇತಿಹಾಸದ ಕಡೆ ದೃಷ್ಟಿ ಹಾಯಿಸಬೇಕು.
ತುಳುನಾಡನ್ನು ಮೊದಲು ಆಡಳಿತ ಮಾಡಿದ ಅಳುಪ ಅರಸರ ದೊರೆ ಮೂರನೆಯ ಕುಲಶೇಖರ (1390) ಮೂಡುಬಿದಿರೆ ಜೈನ ಸ್ವಾಮೀಜಿಗಳ ಪಾದಪದ್ಮಾರಾಧಕನಾಗಿದ್ದ ಎಂಬುದು ಅವನೇ ಬರೆಸಿದ ಮೂಡುಬಿದಿರೆಯ ಗುರುಬಸದಿಯ ಶಾಸನದಲ್ಲಿದೆ. ಆನಂತರ ಆಳ್ವಿಕೆ ನಡೆಸಿದ ತುಳುನಾಡಿನ ಎಲ್ಲ ರಾಜಮನೆತನಗಳು ಜೈನಧರ್ಮವನ್ನು ಅನುಸರಿಸಿದವು. ಬಂಗವಾಡಿಯ ಬಂಗರು, ಪುತ್ತಿಗೆ ಮೂಡಬಿದರೆ ಉಳ್ಳಾಲದಿಂದ ಆಳ್ವಿಕೆ ಮಾಡಿದ ಅಬ್ಬಕ್ಕನ ಪ್ರಸಿದ್ಧಿಯ ಚೌಟ ಅರಸರು, ವೇಣೂರು ಅಳದಂಗಡಿಯ ಅಜಿಲ ಅರಸರು, ಮೂಲ್ಕಿ ಸೀಮೆಯ ಸಾವಂತರು, ಕಾರ್ಕಳದ ಭೈರವರಸರು ಹೀಗೆ 15ಕ್ಕಿಂತ ಹೆಚ್ಚು ರಾಜಮನೆತನಗಳಲ್ಲದೆ, ಇಡೀ ತುಳುನಾಡನ್ನು ಆಳ್ವಿಕೆ ಮಾಡಿದ ನೂರಾರು ಬೀಡು, ಬಲ್ಲಾಳರು, ಹೆಗ್ಗಡೆಯವರು ಜೈನರಾಗಿದ್ದುದನ್ನು ಅಲ್ಲಗಳೆಯಲು ಸಾಧ್ಯವೇ? ಬೆರಳೆಣಿಕೆಯ ರಾಜಮನೆತನಗಳು ಮತ್ತು ಬೀಡುಗಳು ಜೈನೇತರರಿಗೆ ಸೇರಿದರೂ ಶೇ. 90ಕ್ಕಿಂತ ಹೆಚ್ಚು ಜೈನಮನೆತನಗಳು ಇಲ್ಲಿ ಆಳ್ವಿಕೆ ಮಾಡಿದ್ದವು. ಈ ಮನೆತನಗಳು ಎಲ್ಲ ಧರ್ಮ, ಜಾತಿ, ಜನಾಂಗದವರನ್ನು ಸಾಮರಸ್ಯದಿಂದ ಆಳಿದ ನೂರಾರು ಉದಾಹರಣೆಗಳಿವೆ.
ತುಳುನಾಡಿನ ಬಸದಿಗಳಲ್ಲಿ ತೀರ್ಥಂಕರರನ್ನು ಪೂಜಿಸುವ ಈ ಅರಸರು ಅಥವಾ ಬೀಡಿನ ಮುಖ್ಯಸ್ಥರು ತಮ್ಮ ಕುಲದೇವರಾಗಿ ಹಿಂದು ದೇವರುಗಳನ್ನು ಸ್ಥಾಪಿಸಿ ಪರಂಪರೆಯಿಂದ ಪೂಜಿಸಿಕೊಂಡು ಬರುತ್ತಿದ್ದಾರೆ. ಪುತ್ತಿಗೆಯ ಚೌಟರಿಗೆ ಕುಲದೈವ ಚಂದ್ರನಾಥನಾದರೆ ಆರಾಧ್ಯದೈವ ಪುತ್ತಿಗೆಯ ಸೋಮನಾಥ. ಬಂಗವಾಡಿಯ ಬಂಗರಸರ ಕುಲದೇವ ಶಾಂತಿನಾಥ ಮತ್ತು ಸೋಮನಾಥ. ವೇಣೂರಿನ ಅಜಿಲ ಅರಸರ ಕುಲದೈವ ಪಾರ್ಶ್ವನಾಥ ಮತ್ತು ಮಹಾಲಿಂಗ. ಕಾರ್ಕಳದ ಭೈರವರಸರ ಕುಲದೈವ ಪಾರ್ಶ್ವನಾಥ ಮತ್ತು ಕಳಸದ ಕಳಸೇಶ್ವರ. ಮೂಲ್ಕಿಯ ಸಾವಂತರಿಗೆ ಬಪ್ಪನಾಡು ದುರ್ಗೆ ಹಾಗೂ ಸಿಮಂತೂರು ಜನಾರ್ದನ, ಪಡುಬಿದಿರೆ ಕಿನ್ಯಕ್ಕ ಬಲ್ಲಾಳರಿಗೆ ಮಹಾಲಿಂಗೇಶ್ವರ, ಸೂರಾಲಿನ ತೋಳಹರರಿಗೆ ಮಹಾಲಿಂಗೇಶ್ವರ, ಧರ್ಮಸ್ಥಳದ ಕುಲದೇವರು ಚಂದ್ರನಾಥನಾದರೆ, ಹೆಗ್ಗಡೆಯವರ ಆರಾಧ್ಯದೈವ ಮಂಜುನಾಥ. ಎರ್ವಳಿನ ಮಾರಮ್ಮ ಹೆಗ್ಗಡೆಯವರಿಗೆ ಜನಾರ್ದನ ಸ್ವಾಮಿ, ಪುತ್ತೂರಿನ ಹೆಗ್ಗಡೆ ಮನೆತನದವರಿಗೆ ಅಲ್ಲಿಯ ಶಾಂತೀಶ್ವರ ಮತ್ತು ಪುತ್ತೂರಿನ ಮಹಾಲಿಂಗೇಶ್ವರ, ಸುಳ್ಯ ಸೀಮೆಯ ಬಲ್ಲಾಳರಿಗೆ ಚೆನ್ನಕೇಶವ ಹೀಗೆ ನೂರಾರು ಉದಾಹರಣೆಗಳು ಜೈನರ ಸ್ಥಾಪನೆ, ಪೋಷಣೆಯ ಶಾಸನೋಕ್ತ ಅಥವಾ ಇತರ ದಾಖಲೆಗಳ ಇತಿಹಾಸವನ್ನು ಅನಾವರಣಗೊಳಿಸುತ್ತವೆ. ಕುಕ್ಕೆ ಸುಬ್ರಹ್ಮಣ್ಯ, ಜೈನ ಬಂಗರಸರ ಆಡಳಿತದಲ್ಲಿದ್ದುದಕ್ಕೆ ಸುಬ್ರಹ್ಮಣ್ಯದ ಶಾಸನ ಸಹಿತ ಹಲವು ದಾಖಲೆಗಳಿವೆ.
ಜೈನ ನಂಬಿಕೆಗಳು, ಆರಾಧನಾ ಪದ್ಧತಿಗಳು ಉಳಿದ ಧರ್ಮಗಳಿಗೆ ಹೋಲಿಸಿದರೆ ಹಿಂದು ಧರ್ಮಕ್ಕೆ ಅತ್ಯಂತ ಹತ್ತಿರ. ಎಷ್ಟು ಹತ್ತಿರವೆಂದರೆ ಹೊರಗಿನಿಂದ ನೋಡುವ ಅನ್ಯಧರ್ವಿುಯರಿಗೆ ಅವೆರಡೂ ಒಂದೇ ಎಂಬ ಭಾವನೆ ಬರುವಷ್ಟು. ಇದರ ಮುಂದುವರಿದ ಭಾಗವೇ ದೇವಾಲಯಗಳ ನಿರ್ವಣ. ಇತಿಹಾಸವನ್ನು ಓದದವರಿಗೆ ಗೊತ್ತಿಲ್ಲದ ವಿಚಾರವೇನೆಂದರೆ ಹಿಂದು ರಾಜರು ಎಷ್ಟು ಹಿಂದು ದೇವಾಲಯಗಳನ್ನು ನಿರ್ವಿುಸಿದರೋ ಅಷ್ಟೇ ಸಂಖ್ಯೆಯ ದೇವಾಲಯಗಳನ್ನು ಜೈನ ರಾಜರು, ಮಂತ್ರಿಗಳು, ದಂಡನಾಯಕರು, ಪ್ರಜೆಗಳು ನಿರ್ವಿುಸಿದರು, ಪೋಷಿಸಿದರು, ದಾನದತ್ತಿಗಳನ್ನು ನೀಡಿದರು. ಇದಕ್ಕೆ ಉದಾಹರಣೆ- ಹೊಯ್ಸಳ ರಾಜ ವಿಷ್ಣುವರ್ಧನ. ಶೈವತತ್ವದ ಅನುಯಾಯಿಗಳ ಕಿರುಕುಳಕ್ಕೆ ಒಳಗಾದ ವೈಷ್ಣವ ರಾಮಾನುಜಾಚಾರ್ಯರು ಕರ್ನಾಟಕಕ್ಕೆ ಬಂದಾಗ ಅವರಿಗೆ ಆಶ್ರಯ ನೀಡಿದವನು ಜೈನ ಧರ್ವಿುಯನಾದ ಇದೇ ಬಿಟ್ಟಿದೇವ ಅಥವಾ ವಿಷ್ಣುವರ್ಧನ. ಅವನು ನಿರ್ವಿುಸಿದ ಹತ್ತಾರು ವೈಷ್ಣವ ದೇವಾಲಯಗಳು, ಅವನ ಹೆಂಡತಿ ಶಾಂತಲಾದೇವಿ ಮತ್ತು ಮಗಳು ಕೊನೆಯವರೆಗೂ ಜೈನ ಧರ್ವಿುಯರಾಗಿಯೇ ಉಳಿದು ಜಿನಮಂದಿರಗಳನ್ನು ನಿರ್ವಿುಸಿದ ಬಸದಿಗಳು. ಬಾದಾಮಿಯ 4 ಗುಹಾಂತರ ದೇವಾಲಯದಲ್ಲಿ ಶಿವ-ವಿಷ್ಣುವಿನ ಜೊತೆಯಲ್ಲಿಯೇ ಜಿನಾಲಯದ ನಿರ್ವಣ, ಇವುಗಳ ಹಿಂದಿನ ಸಂದೇಶವೇನು? ಇಂತಹ ನೂರಾರು ಉದಾಹರಣೆಗಳು ಕರ್ನಾಟಕದ ಇತಿಹಾಸದಲ್ಲಿವೆ. ವಿಷ್ಣುವರ್ಧನ ಶಾಂತಲೆಯರ ವಂಶಸ್ಥರು ಇಂದು ಬದುಕಿದ್ದು, ಈ ದೇವಾಲಯದಲ್ಲಿ ಮುಖ್ಯಸ್ಥರಾಗಿದ್ದರೆ, ಅದು ನಿಮ್ಮದಲ್ಲ ಎಂದು ವಿರೋಧಿಸುವುದಾದರೆ ಅದು ಎಂತಹ ಮನಸ್ಥಿತಿ!
ಜೈನ ಹೆಗ್ಗಡೆ ವಂಶಸ್ಥರೇ ಸ್ಥಾಪಿಸಿದ, ಕುಡುಮದ ಮಂಜುನಾಥ, ಧರ್ಮಸ್ಥಳದ ಮಂಜುನಾಥನಾಗಿ, ಇಪ್ಪತ್ತು ಪೆರ್ಗಡೆಗಳಿಂದ ಆರಾಧಿಸಲ್ಪಟ್ಟು, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಪರಿಶುದ್ಧ ಭಕ್ತಿ, ಕರ್ತವ್ಯಪರಾಯಣತೆ, ವ್ಯವಹಾರ ಕುಶಲತೆಯಿಂದ ನ ಭೂತೋ ಎಂದು ಬೆಳೆದು ನಿಂತಾಗ, ‘ಜೈನರಿಗೆ ಯಾಕೆ?’ ಎಂದು ಕೇಳಿದರೆ ಉತ್ತರ ಸರಳ. ಅದು ಅವರೇ ಸ್ಥಾಪನೆ ಮಾಡಿದ್ದು, ಅದು ಅವರೇ ಪೋಷಿಸಿದ್ದು, ಆ ವಂಶದವರೇ ಬೆಳಗಿಸಿದ್ದು. ಧರ್ಮಸ್ಥಳದಲ್ಲಿ ಅಣ್ಣಪ್ಪ ಗುಡಿ, ಮಂಜುನಾಥ ದೇವಾಲಯ ಸ್ಥಾಪನೆಗೂ ಪೂರ್ವದಲ್ಲಿ ಇದ್ದದ್ದು ಭಗವಾನ್ ಚಂದ್ರನಾಥ ಬಸದಿ ಮತ್ತು ಕುಡುಮದ ನೆಲ್ಯಾಡಿಬೀಡು ಮಾತ್ರ. ನಂತರ ಬಿರ್ಮಣ್ಣ ಹೆಗ್ಗಡೆ ಅಮ್ಮುಬಲ್ಲಾಳ್ತಿ ಜೈನ ದಂಪತಿಗಳು ತಮ್ಮ ವಾಸದ ಮನೆಯನ್ನೇ ದೇವತೆಗಳಿಗೆ ಬಿಟ್ಟು ಕೊಟ್ಟರು. 1513ರಲ್ಲಿ ದೇವರಾಜ ಹೆಗ್ಗಡೆಯವರ ಕಾಲದಲ್ಲಿ ಉಡುಪಿ ವಾದಿರಾಜ ಯತಿಗಳ ಮಾರ್ಗದರ್ಶನದಲ್ಲಿ ಆಗಮೋಕ್ತ ರೀತಿಯಿಂದ ಮಂಜುನಾಥ ಸ್ವಾಮಿಯ ಪ್ರತಿಷ್ಠಾಪನೆ ನೆರವೇರಿಸಿ, ನಂತರ ತಮ್ಮ ಶಿಷ್ಯಂದಿರನ್ನೂ ಪೂಜೆಗೆ ಬಿಟ್ಟುಹೋಗಿರುವುದರಿಂದ ಇಲ್ಲಿ ಜೈನ, ವೈಷ್ಣವ, ಶೈವ ಹೀಗೆ ಮೂರು ಮತಗಳ ಸಮ್ಮಿಲನದ ಕ್ಷೇತ್ರವಾಗಿ ರೂಪುಗೊಂಡಿತು. 1. ನೆಲ್ಯಾಡಿ ಬೀಡು, 2. ಶ್ರೀ ಚಂದ್ರನಾಥ ಸ್ವಾಮಿ ಬಸದಿ, 3. ಧರ್ಮದೇವತೆಗಳು, 4. ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಮತ್ತು 5. ಶ್ರೀ ಹೆಗ್ಗಡೆಯವರನ್ನು ಒಳಗೊಂಡ ಈ ಐದೂ ಶಕ್ತಿಗಳ ಸಂಯುಕ್ತ ಸಂಸ್ಥೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ. ಇದರಲ್ಲಿ ಒಂದನ್ನು ಮತ್ತೊಂದರಿಂದ ಪ್ರತ್ಯೇಕಿಸುವಂತಿಲ್ಲ ಎಂದು ಸುಪ್ರಿಂಕೋರ್ಟ್ ಆದೇಶಿಸಿದೆ. ಇಲ್ಲಿ ರಥೋತ್ಸವ, ರಂಗಪೂಜೆ ಅಥವಾ ನಿತ್ಯ ನಡೆಯುವ ನೂರಾರು ಆಚರಣೆಗಳಿಗೆ ಪ್ರತಿನಿತ್ಯ ಹೆಗ್ಗಡೆಯವರ ಅನುಮತಿ ಬೇಕು ಎನ್ನುವ ವಿಶಿಷ್ಟ ವಿಚಾರ ಶ್ರದ್ಧಾವಂತ ಧಾರ್ವಿುಕರಿಗೆ ಅರ್ಥವಾಗುತ್ತದೆ.
ಮೌರ್ಯರದು ಭಾರತದ ಮೊಟ್ಟ ಮೊದಲ ಬಹುದೊಡ್ಡ ಸಾಮ್ರಾಜ್ಯ. ಇದರ ಸ್ಥಾಪಕ ಚಂದ್ರಗುಪ್ತ ಮೌರ್ಯ ಜೈನಧರ್ಮವನ್ನು ಪಾಲಿಸಿದ. ರಾಜಕೀಯ ಇತಿಹಾಸವನ್ನು ಗಮನಿಸಿದರೆ ಶಕ್ತರಾಜ ಮನೆತನಗಳೆಲ್ಲವೂ ಜೈನಧರ್ಮದ ಅರಸರುಗಳಿಂದ, ಮಂತ್ರಿಗಳಿಂದ ಮಾತ್ರವಲ್ಲದೆ ಪ್ರಜಾಪರಿವಾರದಿಂದ ಪೋಷಣೆ ಪಡೆದಿದ್ದವು. ಬನವಾಸಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಾಲುಕ್ಯರು ಮಾನ್ಯಖೇಟದ ರಾಷ್ಟ್ರಕೂಟರು, ದ್ವಾರಸಮುದ್ರದ ಹೊಯ್ಸಳರು ಮೊದಲಾದ ವಂಶದಲ್ಲಿ ಆಡಳಿತ ನಡೆಸಿದ ಜೈನ ರಾಜರುಗಳ ಇತಿಹಾಸ ಗಮನಾರ್ಹ. ರಾಷ್ಟ್ರಕೂಟರ ಕಾಲದಲ್ಲಿ ಜೈನಧರ್ವಿುಯರು ಬಹುಸಂಖ್ಯೆಯಲ್ಲಿದ್ದರು. ಕದಂಬ ಅರಸ ರವಿವರ್ಮ, ಗಂಗ ರಾಚಮಲ್ಲ, ಪೋರ್ಚುಗೀಸರನ್ನು ಎದುರಿಸಿದ ಹಿರಿಯ ಮತ್ತು ಕಿರಿಯ ಅಬ್ಬಕ್ಕ, ದೀರ್ಘ ಆಡಳಿತದ ದಾಖಲೆ ಹೊಂದಿರುವ ಕರಿಮೆಣಸಿನ ರಾಣಿ ಚನ್ನಭೈರಾದೇವಿ ಮುಂತಾದ ನೂರಾರು ಆಡಳಿತಗಾರರ ಸಾಮರಸ್ಯದ ವೈಖರಿ ಇತಿಹಾಸ ಓದದ ವಿನಾ ತಿಳಿಯದು. 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಜೈನರು ಇಂದು 50 ಲಕ್ಷಕ್ಕಿಂತ (0.04%) ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದರೆ ಅವರೇನಾದರು?
ತುಳುನಾಡಿನ ದೈವಸ್ಥಾನದಲ್ಲಿ ಯಾವುದಾದರೂ ದೈವ, ಇಲ್ಲಿಯ ಸ್ಥಳೀಯ ಜೈನ ಅರಸರು ಮತ್ತು ಬಲ್ಲಾಳರನ್ನು ಉಲ್ಲೇಖಿಸದಿದ್ದರೆ ಅದು ಪ್ರಾಚೀನ ದೈವವಲ್ಲವೆಂದೇ ಅರ್ಥ. ಅಷ್ಟರಮಟ್ಟಿಗೆ ಈ ದೈವಸ್ಥಾನಗಳ ಸ್ಥಾಪನೆಯ ಹಿಂದೆ ಜೈನರಿದ್ದಾರೆ. ಇಂದು ಸುಳ್ಯ, ಪುತ್ತೂರು ಭಾಗದಲ್ಲಿ ಈ ಜೈನ ಬಲ್ಲಾಳ ಹೆಗ್ಗಡೆ ಮನೆತನದವರು ನಿಸ್ಸಂತತಿ ಹೊಂದಿರಬಹುದು. ಆದರೆ ದೈವಗಳ ಪಾಡ್ದನಗಳಲ್ಲಿ ಮತ್ತು ಅಷ್ಟಮಂಗಲ ಪ್ರಶ್ನೆಗಳಲ್ಲಿ ಅನಿವಾರ್ಯವಾಗಿ ಇವರ ಹೆಸರು ಬರುವುದನ್ನು ಯಾರಿಗೂ ತಪ್ಪಿಸಲು ಸಾಧ್ಯವಾಗಿಲ್ಲ. ಉದಾಹರಣೆಗೆ, ಮೂಡುಬಿದರೆಯ ಚೌಟರು ಜುಮಾದಿ ಪಂಜುರ್ಲಿ, ಬಂಗರಸರು ಮುರ್ತರಾಯೇ ಪಂಜುರ್ಲಿ, ಬೈಲಂಗಡಿಯ ಮೂಲರು ಪಂಜುರ್ಲಿ ರಕ್ತೇಶ್ವರಿ, ಧರ್ಮಸ್ಥಳ ಬೀಡಿನವರು ಪಂಜುರ್ಲಿ ಕಾಳರಾತ್ರಿ ಇತ್ಯಾದಿ. ಹೀಗೆ ನೂರಾರು ದೈವಗಳನ್ನು ಆರಾಧಿಸಿಕೊಂಡು ಬಂದವರು ಈ ಜೈನರು. ದೈವದ ಮೊದಲ ಶಾಸನ ಸಿಗುವುದು 1379ರ ಕಾಂತೇಶ್ವರ ದೇವಾಲಯದಲ್ಲಿ. ಇಲ್ಲಿ ಬರುವ ದೈವಕ್ಕೆ ತಪ್ಪಿದವರು ಎನ್ನುವ ಪದವನ್ನು ಕಾಪಿಟ್ಟ ಕಾಂತೇಶ್ವರ ದೇವಾಲಯದ ಪೋಷಕರು, ಮುಖ್ಯಸ್ಥರು ಇಂದಿಗೂ ಬಾರಾಡಿಬೀಡಿನ ಜೈನ ಬಲ್ಲಾಳರು. ತಮ್ಮ ಹಿರಿಯರು ಸ್ಥಾಪಿಸಿದ ‘ಈ ದೈವಸ್ಥಾನಗಳನ್ನು, ನಂಬಿದ ಸತ್ಯಗಳನ್ನು ಬಿಟ್ಟುಬಿಡಿ ಅದು ನಿಮ್ಮದಲ್ಲ’ ಎಂದರೆ ಅದು ಯಾವ ಮನಸ್ಥಿತಿ? ‘ನನಗೆ ಮಧುಮಾಂಸವೂ ಉಂಟು, ಮಾಂಸರಹಿತ ಜೈನರ ಧರ್ಮವೂ ಉಂಟು’ ಎನ್ನುವ ಆ ಸತ್ಯಗಳ ನ್ಯಾಯಧರ್ಮವನ್ನು ಪ್ರಶ್ನಿಸುವುದು ಯಾವ ಮನಸ್ಥಿತಿ? ತುಳುನಾಡಿನ ಶೇ.95 ಅರಮನೆಗಳು, ಸುಮಾರು ಶೇ.80 ಬೀಡುಗಳು ಇಂದಿಗೂ ಜೈನರ ಕೈಯಲ್ಲಿವೆ. ಸುಮಾರು ಶೇ.50 ಗುತ್ತಿನ ಯಜಮಾನರಾಗಿ ಇಂದಿಗೂ ಜೈನರಿದ್ದಾರೆ. ಇತರ ಊರಿನ ಪ್ರಮುಖ ಮನೆಗಳಲ್ಲಿರುವ ಹಲವು ಬಂಟರು ಅಥವಾ ಅಲ್ಲಿರುವ ಮುಖ್ಯಸ್ಥರು ತಮಗೆ ಈ ಅಧಿಕಾರ ಜೈನ ಮೂಲದಿಂದ ಬಂದಿದೆ ಎನ್ನುತ್ತಾರೆ. ಇಂತಹ ನೂರಾರು ಮನೆತನಗಳಲ್ಲಿ ಹಿರಿಯರಿಗೆ ಬಡಿಸುವಾಗ ಇಂದಿಗೂ ಜೈನ ಎಡೆ ಎಂಬ ಶುದ್ಧ ಸಸ್ಯಾಹಾರದ ಎಲೆ ಇಡುತ್ತಾರೆ. ಜೈನರು ಗುತ್ತಿನ ಯಜಮಾನರಾಗಿ, ಬೀಡಿನ ಮುಖ್ಯಸ್ಥರಾಗಿ ತಮ್ಮ ಹಿರಿಯರು ಸ್ಥಾಪಿಸಿದ ದೇವಳದ, ದೈವಸ್ಥಾನದ ಮುಖ್ಯಸ್ಥರಾಗಿ ಇಂದಿಗೂ ಮುಂದುವರಿದಿದ್ದಾರೆ.
ಸಾವಿರಾರು ವರ್ಷಗಳಿಂದ ಜೈನರು ಈ ದೇವರುಗಳನ್ನು ದೈವಗಳನ್ನು ಆರಾಧಿಸಿಕೊಂಡು ಬಂದದ್ದು ಅದು 21ನೇ ಶತಮಾನದಲ್ಲಿ ಶ್ರೀಮಂತ ದೇವಸ್ಥಾನವಾಗುತ್ತದೆ ಎನ್ನುವ ಕನಸಿನಿಂದಲ್ಲ. ಅವರ ಸಾತ್ವಿಕ ಭಕ್ತಿಗೆ ಶ್ರದ್ಧೆಗೆ ಒಲಿದು ಕ್ಷೇತ್ರ ಶ್ರೀಮಂತವಾಯಿತು ಅಷ್ಟೇ. ತುಳುನಾಡಿನ ಜೈನರು ತಾವು ನಂಬಿರುವ ದೇವಾಲಯದಲ್ಲಿ ತಾಯಿ ಗರ್ಭಿಣಿಯಾಗುವುದರಿಂದ ಹಿಡಿದು ಮಗು ಜನಿಸಿ ನಾಮಕರಣ ಮಾಡಿ ಅವನು ಬೆಳೆದು ಮದುವೆಯಾಗಿ, ಸಾಧನೆ ಮಾಡಿ ಅವನ ಕೊನೆಗಾಲದ ಮರಣದ ನಂತರ ನಡೆಸುವ ಉತ್ತರ ಕ್ರಿಯೆಯವರೆಗೆ ಈ ದೈವ-ದೇವರುಗಳ ಎದುರು ಪೂಜೆ-ಪುನಸ್ಕಾರ, ಶಾಂತಿ- ಹೋಮ- ಹವನಗಳನ್ನು ಮಾಡಿಸುತ್ತಾರೆಂದರೆ, ಅದರ ಅರ್ಥ ಆಡಳಿತ ಮಾಡಿ ಲಾಭ ಮಾಡಬೇಕೆಂಬ ಸ್ವಾರ್ಥ ದಿಂದಲ್ಲ. ಈ ನಂಬಿಕೆ ಅವರ ಪರಂಪರೆಯಿಂದ ಬಂದದ್ದು. ಅವರ ರಕ್ತದ ಕಣಕಣದಲ್ಲೂ ಇದೆ. ನಮ್ಮ ನಮ್ಮ ಕುಟುಂಬದ ವ್ಯಾಪ್ತಿಯಲ್ಲಿರುವ ನಾವು ಸ್ಥಾಪಿಸಿದ, ನಾಗ, ದೈವ-ದೇವರುಗಳು ದೇವಸ್ಥಾನಗಳು, ನಮ್ಮ ಸುತ್ತಮುತ್ತಲ ಜನರಿಗೆ, ಗ್ರಾಮಸ್ಥರಿಗೆ ಕಾರ್ಣಿಕದ ಸ್ಥಳವಾಗಿ ಕಂಡು ಬಂದು, ಇಡೀ ನಾಡಿನಲ್ಲಿ ಪ್ರಸಿದ್ಧವಾದಾಗ, ಹಣದ ಕೊಡುಗೆಯನ್ನೇ ಕೊಡುವ ಕೇಂದ್ರವಾಗಿ ಬೆಳೆದು ನಿಂತಾಗ, ಶ್ರೀಮಂತ ಸಂಸ್ಥೆಯಾಗಿ ಜಗದ್ವಿಖ್ಯಾತವಾದಾಗ, ‘ಅದು ಹಿಂದು ದೇವಾಲಯ, ಅಲ್ಲಿ ನಿಮಗೇನು ಕೆಲಸ, ಶತಮಾನಗಳಿಂದ ತನ್ನ ಹಿರಿಯರು ಆರಾಧಿಸಿಕೊಂಡು ಬಂದ ಈಶ್ವರನನ್ನು ವಿಷ್ಣುವನ್ನು ಮಂಜುನಾಥನನ್ನು ಮಹಾಲಿಂಗನನ್ನು ಆರಾಧಿಸಲು ಆಡಳಿತ ನಡೆಸಲು ನೀವು ಸರಿಯಾದ ವ್ಯಕ್ತಿಗಳಲ್ಲ’ ಎಂದು ದೂಷಿಸುವುದು ಎಂದರೆ ಅದು ಎಂತಹ ಮನಸ್ಥಿತಿ? ಪ್ರಜ್ಞಾವಂತರು ಯೋಚಿಸಬೇಕಲ್ಲವೇ? (ಲೇಖಕರು ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು)