ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಂಘನಿಕೇತನದಲ್ಲಿ ಆಯೋಜಿಸಿದ್ದ ನಾಗರಿಕರ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಸರಕಾರ್ಯವಾಹ ಮುಕುಂದ ಸಿ.ಆರ್ ಮಾತನಾಡಿದರು. 
ನ್ಯೂಸ್

ಜಾಗತಿಕ ಸವಾಲಿಗೆ ಹಿಂದೂ ಸಂಸ್ಕೃತಿಯೇ ಪರಿಹಾರ

ಮಂಗಳೂರು: ಜಾಗತಿಕವಾಗಿ ಎದುರಾಗುವ ಸವಾಲಿಗೆ ಹಿಂದೂ ಸಂಸ್ಕೃತಿಯೇ ಪರಿಹಾರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಸರಕಾರ್ಯವಾಹ ಮುಕುಂದ ಸಿ.ಆರ್ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂಘದ ಶತಮಾನೋತ್ಸವ ಮತ್ತು ಜಾಗತಿಕ ದೃಷ್ಟಿಕೋನ’ ವಿಷಯದ ಪ್ರಮುಖ ನಾಗರಿಕರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತು ಇಂದು ಬಹುಧ್ರುವೀಯ (ಮಲ್ಟಿಪೋಲಾರ್) ವ್ಯವಸ್ಥೆಯತ್ತ ಸಾಗುತ್ತಿದ್ದು, ಡಿಜಿಟಲೈಸೇಶನ್, ಡಿ-ಗ್ಲೋಬಲೈಸೇಶನ್, ಡಿ-ಕಾರ್ಬನೈಸೇಶನ್ ಹಾಗೂ ಜನಸಂಖ್ಯಾ ಪರಿವರ್ತನೆಗಳಂತಹ ಮಹತ್ವದ ಬದಲಾವಣೆಗಳನ್ನು ಎದುರಿಸುತ್ತಿದೆ. ಇಂತಹ ಜಾಗತಿಕ ಸವಾಲುಗಳಿಗೆ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳಲ್ಲಿ ಅಡಗಿರುವ ಜೀವನದೃಷ್ಟಿಯೇ ಸಮತೋಲನದ ಪರಿಹಾರವನ್ನು ಒದಗಿಸಬಲ್ಲದು. ಸಂಘವು ಕೇವಲ ಒಂದು ಸಂಘಟನೆಯಲ್ಲ; ಅದು ಸಿದ್ಧಾಂತ, ಸಂಘಟನೆ, ಆಂದೋಲನ ಹಾಗೂ ಜೀವನ ವಿಧಾನವೂ ಆಗಿದೆ. ಕಳೆದ ನೂರು ವರ್ಷಗಳಲ್ಲಿ ಸಂಘವು ವ್ಯಕ್ತಿ ನಿರ್ಮಾಣದ ಮೂಲಕ ಸಮಾಜದಲ್ಲಿ ಮೌಲ್ಯಾಧಾರಿತ ಕಾರ್ಯಶಕ್ತಿಯನ್ನು ರೂಪಿಸಿದೆ. ಈ ಕಾರ್ಯಶಕ್ತಿಯೇ ಸಮಾಜ ಮತ್ತು ವ್ಯವಸ್ಥಾ ಪರಿವರ್ತನೆಗೆ ಕಾರಣವಾಗಿದೆ ಎಂದರು.
ಸಂಘದ ಸಾಧನೆಗಳಾದ 370ನೇ ವಿಧಿ ರದ್ದು, ರಾಮಮಂದಿರ ನಿರ್ಮಾಣ, ಶಿಕ್ಷಣ ನೀತಿ ಮತ್ತು ಆತ್ಮನಿರ್ಭರ ಭಾರತದಂತಹ ವ್ಯವಸ್ಥಾ ಪರಿವರ್ತನೆಗಳಿಗಿಂತ ಸಾಮಾಜಿಕ ಪರಿವರ್ತನೆ ಮುಖ್ಯವಾಗಿದೆ. ಸಮರಸತೆ, ಸ್ವದೇಶಿ, ಪರಿಸರ ಸಂರಕ್ಷಣೆ ಮತ್ತು ನಾಗರಿಕ ಕರ್ತವ್ಯಗಳು ವ್ಯಕ್ತಿ ಹಾಗೂ ಕುಟುಂಬದ ಮಟ್ಟದಲ್ಲಿ ಬದಲಾಗದಿದ್ದರೆ ಯಾವುದೇ ವ್ಯವಸ್ಥಾ ಬದಲಾವಣೆ ಶಾಶ್ವತವಾಗುವುದಿಲ್ಲ. ಜಾಗತಿಕವಾಗಿ ವಿಶ್ವವು ಬಹುಧ್ರುವೀಯ ವ್ಯವಸ್ಥೆಯತ್ತ ಸಾಗುತ್ತಿದ್ದು, ತಂತ್ರಜ್ಞಾನ, ಇಂಧನ ಮತ್ತು ಜನಸಂಖ್ಯಾ ಅಸಮತೋಲನಗಳು ಹೊಸ ಸವಾಲುಗಳನ್ನು ಸೃಷ್ಟಿಸುತ್ತಿವೆ. ಭಾರತದಲ್ಲಿಯೂ ಆರೋಗ್ಯಕರ ಜನಸಂಖ್ಯಾ ರಚನೆ ಕಾಪಾಡುವುದು ಅಗತ್ಯವಾಗಿದೆ ಎಂದು ಮುಕುಂದ ಸಿ.ಆರ್ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಘ ಚಾಲಕ್ ಡಾ.ಪಿ.ವಾಮನ ಶೆಣೈ, ಮಂಗಳೂರು ಮಹಾನಗರ ಸಂಘ ಚಾಲಕ್ ಡಾ.ಸತೀಶ್ ರಾವ್ ಉಪಸ್ಥಿತರಿದ್ದರು.
ಸಂಘದ ಪ್ರಮುಖರಾದ ಉದಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಾಸ್ ಯು.ಎಸ್ ವಂದಿಸಿದರು. ಶಿವರಾಜ್ ಕಾರ್ಯಕ್ರಮ ನಿರೂಪಿಸಿದರು.
----------------------
‘ವಸುಧೈವ ಕುಟುಂಬಕಂ’ ಮತ್ತು ಪ್ರಕೃತಿಯೊಂದಿಗೆ ಸಹಜೀವನ ನಡೆಸುವ ಭಾರತೀಯ ಸಂಸ್ಕೃತಿಯ ತತ್ವಗಳನ್ನೇ ಇಂದು ಜಗತ್ತು ‘ಸಸ್ಟೇನಬಲ್ ಡೆವಲಪ್ಮೆಂಟ್’ ಎಂದು ಕರೆಯುತ್ತಿದೆ. ಇದರಿಂದಾಗಿ ಜಾಗತಿಕ ಚಿಂತಕರು ಸಂಘದ ಕಾರ್ಯಪದ್ಧತಿ ಹಾಗೂ ಹಿಂದೂ ಮೌಲ್ಯಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಸಂಘದ ಶತಮಾನೋತ್ಸವವು ಸಂಭ್ರಮಾಚರಣೆಯಲ್ಲ, ಬದಲಿಗೆ ಸಮಾಜ ಪರಿವರ್ತನೆಯ ಸಂಕಲ್ಪದ ಸಂದರ್ಭವಾಗಿದೆ. ರಾಜಕೀಯ ಬದಲಾವಣೆಗಿಂತ ಸಾಮಾಜಿಕ ಬದಲಾವಣೆಯೇ ಶಾಶ್ವತವಾಗಿದ್ದು, ಶಕ್ತಿಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು.
-ಮುಕುಂದ ಸಿ.ಆರ್,
ಆರ್‌ಎಸ್‌ಎಸ್ ಅಖಿಲ ಭಾರತೀಯ ಸಹ ಸರಕಾರ್ಯವಾಹ
---------------------