ನ್ಯೂಸ್

LIVE| ಅಟಲ್​ ಸುರಂಗ ಲೋಕಾರ್ಪಣೆಗೊಳಿಸಿ ಇತಿಹಾಸ ಬರೆದ ಪ್ರಧಾನಿ ಮೋದಿ!

ಶಿಮ್ಲಾ: ವಿಶ್ವದಲ್ಲೇ ಅತಿ ಉದ್ದವಾದ ಮತ್ತು ಕುದುರೆ ಲಾಳದ ಆಕಾರದ ಅಟಲ್​ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅ. 3 ಶನಿವಾರ) ಬೆಳಗ್ಗೆ 10.20ರ ಸುಮಾರಿಗೆ ಲೋಕಾರ್ಪಣೆಗೊಳಿಸಿ ಇತಿಹಾಸ ಬರೆದರು. ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ಸುರಂಗ ಮಾರ್ಗವೂ ಲೇಹ್​ ಮತ್ತು ಮನಾಲಿ ನಡುವೆ ಸುಮಾರು 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.

ಟೇಪ್​ ಕತ್ತರಿಸುವ ಮೂಲಕ ಪ್ರಧಾನಿ ಮೋದಿ ಸುರಂಗ ಉದ್ಘಾಟಿಸಿದರು. ಬಳಿಕ ಸುರಂಗದ ಒಳಹೊಕ್ಕಿ ಪರಿಶೀಲಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾಣೆ ಹಾಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಸುರಂಗ ಉದ್ಘಾಟನೆಗಾಗಿ ವಿಶೇಷ ವಿಮಾನದಲ್ಲಿ ಮನಾಲಿಗೆ ಆಗಮಿಸಿದರು. ಜತೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೂಡ ಇದ್ದರು.

ಸುರಂಗ ಕುರಿತು ಜನತೆಗೆ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಈ ಅಭಿವೃದ್ಧಿ ಯೋಜನೆನ್ನು ನೇರವಾಗಿಯೇ ಉದ್ಘಾಟಿಸುತ್ತೇನೆ. ಬಹುದೊಡ್ಡ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಬೇಕೆಂದು ಬಯಸಿದ್ದೆವು. ಆದರೆ, ಕರೊನಾ ವೈರಸ್​ನಿಂದಾಗಿ ಚಿಕ್ಕದಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗಡಿ ಭದ್ರತಾ ದೃಷ್ಟಿಯಿಂದ ಈ ಸುರಂಗವೂ ಬಹು ದೊಡ್ಡ ಸಂದೇಶವನ್ನು ರವಾನಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಉದ್ಘಾಟನೆಗೂ ಮುನ್ನ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಮಾತನಾಡಿ, ನಾವು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಕಾಯುತ್ತಿದ್ದೇವೆ. ಇದು ಹಿಮಾಚಲ ಪ್ರದೇಶದ ಜನರ ಅತ್ಯಂತ ಸಂತಸದ ಕ್ಷಣವಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಸುರಂಗವೂ ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ಮಹತ್ವದ್ದಾಗಿದೆ. ಅಲ್ಲದೆ, ಜನರ ಪ್ರಯಾಣಕ್ಕೂ ಸಹಕಾರಿಯಾಗಿದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಸುಮಾರು 200 ಗಣ್ಯರು ಭಾಗವಹಿಸಲಿದ್ದಾರೆ. ಶುಕ್ರವಾರವಷ್ಟೇ ಅಟಲ್​​ ಸುರಂಗಕ್ಕೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭೇಟಿ ನೀಡಿ, ಉದ್ಘಾಟನಾ ಕಾರ್ಯಕ್ರಮದ ತಯಾರಿಯನ್ನು ವೀಕ್ಷಿಸಿದ್ದರು.

ಅಟಲ್​ ಸುರಂಗ ಕುರಿತಾದ 10 ಪ್ರಮುಖಾಂಶಗಳು ಹೀಗಿವೆ...

1. ಅಟಲ್​ ಸುರಂಗವನ್ನು ನಿರ್ಮಿಸುವ ತೀರ್ಮಾನವನ್ನು 2000, ಜೂನ್​ 3ರಂದು ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡಿದ್ದರು. 2002, ಮೇ 26ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು.

2. 2019, ಡಿಸೆಂಬರ್​ 25ರಂದು ರೋಹ್ಟಾಂಗ್​ ಸುರಂಗ ಮಾರ್ಗವನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ "ಅಟಲ್​​ ಸುರಂಗ" ಎಂದು ಮರುನಾಮಕರಣ ಮಾಡಲಾಯಿತು.

3. ಅಲಟ್​​ ಸುರಂಗವೂ ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿದೆ.

4. ಸುರಂಗವೂ ಸುಮಾರು 9.02 ಕಿ.ಮೀ ಉದ್ದವಿದೆ. ಅಲ್ಟ್ರಾ-ಮಾಡರ್ನ್​ ವಿಶೇಷತೆಗಳಿಂದ ಹಿಮಾಲಯದ ಪಿರ್​ ಪಂಜಲ್​ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ.

5. ವಿಶ್ವದಲ್ಲೇ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಖ್ಯಾತಿಗೆ ಅಟಲ್​ ಸುರಂಗ ಮಾರ್ಗ ಭಾಜನವಾಗಿದ್ದು, ಇದು ಮನಾಲಿ ಮತ್ತು ಲೇಹ್​ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದ್ದು, ಪ್ರಯಾಣದ ದೂರ 4 ರಿಂದ 5 ಗಂಟೆ ತೆಗೆದುಕೊಳ್ಳಲಿದೆ.

6. ಸುರಂಗವೂ ಕುದರೆ ಲಾಳದ ಆಕಾರದಲ್ಲಿದೆ. ಸಿಂಗಲ್​ ಟ್ಯೂಬ್ ಡಬಲ್ ಲೇನ್ ಸುರಂಗವು 8 ಮೀಟರ್ ರಸ್ತೆಮಾರ್ಗವನ್ನು ಹೊಂದಿದೆ ಮತ್ತು 5.525 ಮೀಟರ್ ಓವರ್​ ಹೆಡ್​ ಕ್ಲಿಯರೆನ್ಸ್ ಹೊಂದಿದೆ.

7. ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ದಿನಕ್ಕೆ 3,000 ಕಾರುಗಳು ಮತ್ತು 1,500 ಟ್ರಕ್‌ಗಳ ಸಂಚಾರ ಸಾಂದ್ರತೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

8. ಸುರಂಗವೂ 10.5 ಮೀಟರ್​ ಅಗಲವಿದೆ ಮತ್ತು 3.6 X 2.25 ಮೀಟರ್​ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿಯೇ ನಿರ್ಮಿಸಲಾಗಿದೆ.

9. ಸಿಸಿಟಿವಿ ಕ್ಯಾಮೆರಾ, ಯಾವುದೇ ತುರ್ತು ಪರಿಸ್ಥಿತಿಗಾಗಿ ಪ್ರತಿ 150 ಮೀಟರ್​ಗೆ ಟೆಲಿಫೋನ್ ಸಂಪರ್ಕ, ಪ್ರತಿ 60 ಮೀಟರ್​ಗೆ ಅಗ್ನಿಶಾಮಕ ಯಾಂತ್ರಿಕ ವ್ಯವಸ್ಥೆ ಮತ್ತು ಸ್ವಯಂ ಘಟನೆ ಪತ್ತೆ ವ್ಯವಸ್ಥೆ ಸೇರಿದಂತೆ ಸುರಂಗದಲ್ಲಿ ವಿವಿಧ ರೀತಿಯ ಭದ್ರತಾ ಸಾಧನಗಳಿವೆ.

10. ಪ್ರತಿ 25 ಮೀಟರ್‌ನಲ್ಲಿ ಸ್ಥಳಾಂತರಿಸುವ ದೀಪಗಳು ಮತ್ತು ನಿರ್ಗಮನ ಚಿಹ್ನೆಗಳು ಮತ್ತು ವಿಸ್ತರಣಾ ವ್ಯವಸ್ಥೆಗಳಿವೆ.