Himachal Pradesh: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟಕ್ಕೆ ಜನರ ಜೀವ ಮತ್ತು ಜೀವನ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಇತ್ತೀಚಿನ ವರದಿ ಪ್ರಕಾರ, ಭಾರೀ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಇಲ್ಲಿಯವರೆಗೆ ಐವರು ಸಾವನ್ನಪ್ಪಿದ್ದರೆ, ಹಲವರು ಕಾಣೆಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಉಂಟಾಗಿದ್ದು, ರಾಜ್ಯದ ಹಲವಾರು ಪ್ರದೇಶಗಳು ಮುಳುಗಡೆಯಾಗಿವೆ. ಕುಲ್ಲು ಮತ್ತು ಕಾಂಗ್ರಾ ಜಿಲ್ಲೆಗಳು ಸೇರಿದಂತೆ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ, ದಿಢೀರ್ ಪ್ರವಾಹ ಮತ್ತು ಮೇಘಸ್ಫೋಟ ಉಂಟಾಗಿದ್ದು, ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಈಗಾಗಲೇ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಹಿನ್ನಲೆ ಜೂನ್ 29 ರವರೆಗೆ ಉನಾ, ಬಿಲಾಸ್ಪುರ್, ಸೋಲನ್, ಶಿಮ್ಲಾ, ಸಿರ್ಮೌರ್, ಕಾಂಗ್ರಾ, ಚಂಬಾ, ಕುಲ್ಲು ಮತ್ತು ಮಂಡಿ ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆಯಿದೆ ಎಂದು ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ರಾಜ್ಯದ ಮೂರು ಸ್ಥಳಗಳಲ್ಲಿ ಮೇಘಸ್ಫೋಟಗಳು ಸಂಭವಿಸಿವೆ ಮತ್ತು ಒಂಬತ್ತು ಸ್ಥಳಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ ಎಂದು ಸಿಎಂ ಸುಖ್ವಿಂದರ್ ಸುಖು ಹೇಳಿದ್ದಾರೆ.
ಇದನ್ನೂ ಓದಿ: ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಬಿಗ್ ಶಾಕ್: ಗಾಯಗೊಂಡ ಪ್ರಮುಖ ಆಟಗಾರ! IND vs ENG
"ಇದುವರೆಗೆ 250 ಜನರನ್ನು ರಕ್ಷಿಸಲಾಗಿದೆ. ಇಲ್ಲಿಯವರೆಗೆ ಆರು ಜನರು ಕಾಣೆಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಜಂಟಿ ಕಾರ್ಯಾಚರಣೆಯಲ್ಲಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸುವಲ್ಲಿ ಮುಂದಾಗಿದೆ" ಎಂದು ಎನ್‌ಡಿಆರ್‌ಎಫ್ ಕಮಾಂಡೆಂಟ್ ಬಲ್ಜಿಂದರ್ ಸಿಂಗ್ ತಿಳಿಸಿದ್ದಾರೆ,(ಏಜೆನ್ಸೀಸ್).