ನ್ಯೂಸ್

ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಪಕ್ಷ ಬಿಜೆಪಿಗೆ ಹಿನ್ನಡೆ: ಗೆಲುವಿನ ಸನಿಹದಲ್ಲಿರುವ ಕಾಂಗ್ರೆಸ್​ಗೆ ಆಪರೇಷನ್​ ಕಮಲದ ಭೀತಿ

ನವದೆಹಲಿ: ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿಗೆ ಹಿಮಾಚಲ ಪ್ರದೇಶದಲ್ಲಿ ಹಿನ್ನಡೆಯಾಗುತ್ತಿದೆ. ಆಡಾಳಿತಾರೂಢ ಬಿಜೆಪಿಗೆ ನೆಕ್​ ಟು ನೆಕ್​ ಪೈಟ್​ ಕೊಟ್ಟ ಕಾಂಗ್ರೆಸ್, ಅಧಿಕಾರದ ಗದ್ದುಗೆ ಏರುವ ಸನಿಹದಲ್ಲಿದೆ. ಗೆಲುವಿನತ್ತ ಮುನ್ನುಗುತ್ತಿರುವ ಸಂಭ್ರಮದ ಜತೆಗೆ ಆಪರೇಷನ್​ ಕಮಲದ ಭೀತಿಯೂ ಕಾಂಗ್ರೆಸ್​ಗೆ ​ಆವರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಛತ್ತೀಸ್​ಗಢಕ್ಕೆ ಸ್ಥಳಾಂತರಿಸಿದೆ.

ನವೆಂಬರ್​ 12ರಂದು ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ನಡೆದಿತ್ತು. ಇಂದು(ಡಿ.8) ಮತ ಎಣಿಕೆ ನಡೆಯುತ್ತಿದ್ದು, ಒಟ್ಟು 68 ಕ್ಷೇತ್ರಗಳು ರಾಜ್ಯದಲ್ಲಿದ್ದು, ಮ್ಯಾಜಿಕ್​ ನಂಬರ್​ 35 ಗೆಲ್ಲಬೇಕಿದೆ. ಮಧ್ಯಾಹ್ನ 12ರ ವರೆಗಿನ ಮಾಹಿತಿಯಂತೆ ಕಾಂಗ್ರೆಸ್​ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಮೂವರು ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

1985ರಿಂದ ಇಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತಾ ಬಂದಿದೆ. ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ಕಾಂಗ್ರೆಸ್​ನಿಂದ ಪ್ರಬಲ ಪೈಪೋಟಿ ಎದುರಿಸಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕೂಡ ಯಾರೂ ಬೇಕಾದರೂ ಅಧಿಕಾರಕ್ಕೆ ಬರಬಹುದು ಎಂಬ ವರದಿಗಳು ಬಂದಿವೆ. ಕಳೆದ ಬಾರಿ ಬಿಜೆಪಿ 44 ಸೀಟುಗಳನ್ನು ಗೆದ್ದಿತ್ತು. 21 ಸ್ಥಾನಗಳನ್ನು ಕಾಂಗ್ರೆಸ್​ ಗೆದ್ದುಕೊಂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ತವರು ರಾಜ್ಯ ಹಿಮಾಚಲ ಪ್ರದೇಶ.