ನ್ಯೂಸ್

ಇಡೀ ಗ್ರಾಮಕ್ಕೆ ಕರೊನಾ ಅಂಟಿರುವಾಗ ಈತನ ಬಳಿ ಸೋಂಕು ಸುಳಿಯಲೇ ಇಲ್ಲ: ಕಾರಣ ನಿಜಕ್ಕೂ ಅಚ್ಚರಿ!​

ಚಂಡೀಗಢ: ಗ್ರಾಮದ ಎಲ್ಲರಿಗೂ ಕರೊನಾ ಪಾಸಿಟಿವ್​ ಇರುವಾಗ ಅದೇ ಗ್ರಾಮದ ಒಬ್ಬನೇ ಒಬ್ಬ ವ್ಯಕ್ತಿಗೆ ಮಾತ್ರ ಸೋಂಕು ತಗುಲದ ಕುತೂಹಲಕಾರಿ ಪ್ರಕರಣ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಜಿಲ್ಲೆಯ ಗ್ರಾಮವೊಂದರಲ್ಲಿ ಕಂಡುಬಂದಿದೆ.

ಶೂನ್ಯಕ್ಕಿಂತ ಕಡಿಮೆ ತಾಪಮಾನ ಹಾಗೂ ಕರೊನಾಗೆ ಅನುಕೂಲಕರ ವಾತಾವರಣವಿರುವ ಹಿಮಬೆಟ್ಟಗಳ ವಲಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಥೋರಂಗ್​ ಗ್ರಾಮ ಎದುರಿಸಿದೆ. ಇಡೀ ಗ್ರಾಮವೇ ಕರೊನಾ ಕರಿನೆರಳಿನಲ್ಲಿ ಇರುವಾಗ ಭೂಷಣ್​ ಠಾಕೂರ್​ (52) ಎಂಬ ವ್ಯಕ್ತಿಯ ಹತ್ತಿರವೂ ಕರೊನಾ ಸುಳಿಯದೇ ಇರುವುದು ಅಚ್ಚರಿಯ ಸಂಗತಿಯೇ ಸರಿ.

ಅಂದಹಾಗೆ ಠಾಕೂರ್ ಅವರು​ ಕರೊನಾದಿಂದ ತಪ್ಪಿಸಿಕೊಳ್ಳಲು ಯಾವುದೇ ಕರಾಮತ್ತು ಮಾಡಿಲ್ಲ. ಬದಲಾಗಿ ಎಲ್ಲರಂತೆ ಸಾಮಾನ್ಯ ರಕ್ಷಣಾ ತಂತ್ರಗಳನ್ನೇ ಅನುಸರಿಸುವ ಮೂಲಕ ಕರೊನಾದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಠಾಕೂರ್​, ನನಗೆ ಕರೊನಾ ನೆಗೆಟಿವ್​ ಬರಲು ಪ್ರಮುಖ ಕಾರಣವೆಂದರೆ ನಾನು ಚಾಚೂ ತಪ್ಪದೇ ಮಾಸ್ಕ್​, ಸ್ಯಾನಿಟೈಸರ್​ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೆ ಎಂದು ತಿಳಿಸಿದರು.

ನನ್ನ ಕುಟುಂಬದ ಆರು ಜನರಿಗೆ ಕರೊನಾ ಪಾಸಿಟಿವ್​ ಇದೆ. ಇದು ತಿಳಿದ ತಕ್ಷಣ ನನ್ನಷ್ಟಕ್ಕೆ ನಾನೇ ಪ್ರತ್ಯೇಕವಾದೆ. ಪ್ರತ್ಯೇಕವಾದ ಕೊಠಡಿಯಲ್ಲಿ ನಾನೇ ಅಡುಗೆ ಮಾಡಿಕೊಳ್ಳುತ್ತಿದ್ದೆ. ಮೊದಲೇ ನಮ್ಮದು ಶೀತವಲಯ ಆಗಿರುವುದರಿಂದ ಚಳಿ ನಿವಾರಣೆಗೆ ಬೆಂಕಿ ಕಾಯಲು ಎಲ್ಲರು ಒಂದೆಡೆ ಸೇರಿದಾಗ ಕರೊನಾ ಹರಡಿದೆ ಎಂದು ಠಾಕೂರ್​ ಹೇಳಿದರು.

ಥೋರಂಗ್​ ಗ್ರಾಮ ಗ್ರಾಮದಲ್ಲಿ ಸುಮಾರು 160 ಜನರಿದ್ದಾರೆ. ಚಳಿಯ ಕಾರಣ ಗ್ರಾಮದ ಜನರು ಬೇರೆ ಪ್ರದೇಶಗಳಲ್ಲಿ ವಲಸೆ ಹೋಗಿದ್ದಾರೆ. ಉಳಿದ 42 ಮಂದಿಯಲ್ಲಿ ನವೆಂಬರ್​ 13ರಂದು 41 ಜನರಿಗೆ ಕೆರೊನಾ ಪಾಸಿಟಿವ್​ ಆಗಿದೆ. ಶನಿವಾರ ಮತ್ತೆ ಪರೀಕ್ಷಿಸಿದಾಗ ಕೆಲವರಿಗೆ ನೆಗೆಟಿವ್​ ಬಂದಿದೆ. ಅ. 13ರಂದು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕರೊನಾ ಹರಡು ಇದೇ ಕಾರಣವಾಗಿರಬಹುದು ಎನ್ನುತ್ತಾರೆ ಲಾಹೌಲ್-ಸ್ಪಿಟಿ ಜಿಲ್ಲೆಯ ಡೆಪ್ಯುಟಿ ಕಮಿಷನರ್​ ಪಂಕಜ್​ ರಾಜ್​.

ಇನ್ನು ಹಿಮಾಚಲ ಪ್ರದೇಶದಲ್ಲಿ ಇಲ್ಲಿಯವರೆಗೆ 33 ಸಾವಿರಕ್ಕೂ ಅಧಿಕ ಮಂದಿಗೆ ಕರೊನಾ ಪಾಸಿಟಿವ್​ ವರದಿಯಾಗಿದೆ. ಇದರಲ್ಲಿ 518 ಮಂದಿ ಮೃತಪಟ್ಟಿದ್ದು, 26 ಸಾವಿರ ಮಂದಿ ಗುಣಮುಖರಾಗಿದ್ದಾರೆ. 7,070 ಸಕ್ರೀಯ ಪ್ರಕರಣಗಳಿವೆ. (ಏಜೆನ್ಸೀಸ್​)