ನ್ಯೂಸ್

ಪ್ರವಾಹದಲ್ಲಿ ಕೊಚ್ಚಿ ಹೋದ ಅಪ್ಪ-ಅಮ್ಮ, ಅಜ್ಜಿ! ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದ 11 ತಿಂಗಳ ಮಗು..Floods

Flood : ಹಿಮಾಚಲ ಪ್ರದೇಶದದಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂಕುಸಿತದಿಂದ ಪ್ರವಾಹ ಉಂಟಾಗಿದ್ದು,ನೂರಾರು ಮಂದಿ ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಭೀಕರ ಪ್ರವಾಹದಲ್ಲಿ ಕುಟುಂಬವೊಂದು ಕೊಚ್ಚಿಕೊಂಡು ಹೋಗಿದ್ದು, 11 ತಿಂಗಳ ಮಗು ಪವಾಡ ಸದೃಶವಾಗಿ ಬದುಕಿ ಉಳಿದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ.

ಜೂನ್ 30 ರ ರಾತ್ರಿ ಸೆರಾಜ್ ವಿಧಾನಸಭಾ ಕ್ಷೇತ್ರದಲ್ಲಿ ಹಠಾತ್ ಪ್ರವಾಹವಾಗಿದ್ದು, 11 ತಿಂಗಳ ಮಗುವೊಂದು ಅದ್ಭುತವಾಗಿ ಬದುಕುಳಿದಿದೆ. ಭಾರೀ ಮಳೆಯ ನಡುವೆ ಮಗುವಿನ ಪೋಷಕರು ಮತ್ತು ಅಜ್ಜಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗಿದೆ. ದುರಂತದ ಬಗ್ಗೆ ಸಂಪೂರ್ಣವಾಗಿ ಅರಿವಿಲ್ಲದ 11 ತಿಂಗಳ ವಯಸ್ಸಿನ ಮಗು  ಮನೆಯೊಳಗೆ ಜೀವಂತವಾಗಿ ಪತ್ತೆಯಾಗಿದೆ.

ಭಾರಿ ಮಳೆಯಿಂದ ನೀರಿನ ಮಟ್ಟ ಏರಲು ಪ್ರಾರಂಭಿಸಿದಾಗ, ಕುಟುಂಬ ಸದಸ್ಯರು, ತಂದೆ ರಮೇಶ್, ತಾಯಿ ರಾಧಾ ಮತ್ತು ಅಜ್ಜಿ ಪೂರ್ಣು ದೇವಿ ತಮ್ಮ ಮನೆಯ ಹಿಂದೆ ಉಕ್ಕಿ ಹರಿಯುತ್ತಿದ್ದ ಹೊಳೆಯ ಪ್ರವಾಹದ ದಿಕ್ಕನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರು. ಈ ವೇಳೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಮಗು ಮನೆಯೊಳಗೆ ನಿದ್ರಿಸುತ್ತಿತ್ತು ಮತ್ತು ಸುರಕ್ಷಿತವಾಗಿತ್ತು. ಆಕೆಯ ತಂದೆ ರಮೇಶ್ ಅವರ ಮೃತದೇಹ ಪತ್ತೆಯಾಗಿದೆ. ರಾಧಾ ಮತ್ತು ಪೂರ್ಣು ದೇವಿಗಾಗಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ದುರಂತದ ಅರಿವಿಲ್ಲದೆ ಹೆಣ್ಣು ಮಗುವಿನ ತಂದೆಯ ಚಿಕ್ಕಮ್ಮ ತಾರಾ ದೇವಿ ನೋಡಿಕೊಳ್ಳುತ್ತಿದ್ದಾರೆ.

ಗೋಹಾರ್‌ನ ಎಸ್‌ಡಿಎಂ (ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುವ) ಸ್ಮೃತಿಕಾ ನೇಗಿ, ಮಗುವನ್ನು ದತ್ತು ಪಡೆಯಲು ಮುಂದಾಗುವ ವ್ಯಕ್ತಿಗಳಿಂದ ವೈಯಕ್ತಿಕವಾಗಿ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.