ನ್ಯೂಸ್

ಹೆಬ್ಬಾಳು-ಲೋಕನಾಯಕನಗರದಲ್ಲಿ ಪಾದಯಾತ್ರೆ

ಮೈಸೂರು: ಮಳೆ ನೀರು ಚರಂಡಿ ಮಾಡಿಸಿಕೊಡಿ, ವಿದ್ಯುತ್ ಕಂಬ ಸ್ಥಳಾಂತರಿಸಿಕೊಡಿ, ವಿದ್ಯುತ್ ದೀಪ ಅಳವಡಿಸಲು ಸೂಚನೆ ನೀಡಿ, ಆಶ್ರಯ ಮನೆಗಳಿಗೆ ಹಕ್ಕು ಖುಲಾಸೆ ಪತ್ರವನ್ನು ಕೊಡಿಸಿಕೊಡಿ…
ಇವು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ಪಾಲಿಕೆಯ ವಾರ್ಡ್ ಸಂಖ್ಯೆ 4 ರ ಹೆಬ್ಬಾಳು-ಲೋಕನಾಯಕನಗರದಲ್ಲಿ ಸೋಮವಾರ ನಡೆಸಿದ ಪಾದಯಾತ್ರೆಯಲ್ಲಿ ಕೇಳಿ ಬಂದ ಆಹವಾಲುಗಳಿವು.
ಹೆಬ್ಬಾಳಿನ ಹೆಬ್ಬಾಗಿಲಿನಿಂದ ಆರಂಭವಾದ ಪಾದಯಾತ್ರೆ ಗಣಪತಿ-ಚಾಮುಂಡೇಶ್ವರಿ ದೇವಸ್ಥಾನ, ಸಂಜೀವಿನಿ ವೃತ್ತ, ಕಾಳೇಗೌಡರ ಸೈಟ್ ಮುಖ್ಯರಸ್ತೆ, ಆಶ್ರಯ ಮನೆಗಳ ಬೀದಿ, ನಂದಿ ಸ್ಟೋರ್, ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ ವೃತ್ತ, ಆಶಾ ಮಂದಿರ ರಸ್ತೆ, ಹೆಬ್ಬಾಳ ಕಾಲನಿ ಪಾದಯಾತ್ರೆ ನಡೆಸಿದ ಬಳಿಕ ನಿಂಗಯ್ಯನ ಕೆರೆ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜನ ಸಂಪರ್ಕ ಸಭೆ ನಡೆಸಿದರು.
ಹೆಬ್ಬಾಳು-ಲೋಕನಾಯಕನಗರ ವ್ಯಾಪ್ತಿಯ ಜನರ ಮನೆ ಬಾಗಿಲಿಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ವಾರ್ಡ್‌ನ ವ್ಯಾಪ್ತಿಯಲ್ಲಿ ಹಲವಾರು ರಸ್ತೆಗಳಿಗೆ ಮಳೆ ನೀರು ಚರಂಡಿ ಇಲ್ಲದಿರುವುದರ ಬಗ್ಗೆ ಅಲ್ಲಿನ ನಿವಾಸಿಗಳು ದೂರಿದರು. ಸ್ಥಳದಲ್ಲಿದ್ದ ಪಾಲಿಕೆಯ ಅಭಿಯಂತರರಿಗೆ ಅವಶ್ಯವಿರುವ ರಸ್ತೆಗಳಿಗೆ ಮಳೆ ನೀರು ಚರಂಡಿ ಮಾಡಿಸಲು ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ತಿಳಿಸಿದರು ಹಾಗೂ ನಿವಾಸಿಗಳಿಗೆ ಸದರಿ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಲಾಗುವುದೆಂದು ಭರವಸೆ ನೀಡಿದರು.
ಹುಡ್ಕೋ ಬಡಾವಣೆಯ ಆಶ್ರಯ ಮನೆಗಳಿಗೆ ಹಕ್ಕು ಖುಲಾಸೆ ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು ಶೀಘ್ರ ಬಗೆಹರಿಸಿ ಹಕ್ಕು ಖುಲಾಸೆ ಪತ್ರ ನೀಡಲು ಕ್ರಮವಹಿಸುವಂತೆ ಶಾಸಕರು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.