ಬಿ.ವೈ.ರಾಘವೇಂದ್ರ 
ನ್ಯೂಸ್

ಹೆದ್ದಾರಿ ನಿರ್ಮಾಣ ಕಾಮಗಾರಿ ಶೀಘ್ರ ಆರಂಭ

ಶಿವಕುಮಾರ ಎಸ್.ಪಿ.

ಸಾಗರ: ನಗರದ ಶಿವಪ್ಪನಾಯಕ ವೃತ್ತದಿಂದ ಮರಕುಟುಕವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 700 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತುಮರಿ ಸೇತುವೆ ಮಳೆಗಾಲದೊಳಗೆ ಲೋಕಾರ್ಪಣೆ ಆಗುವ ಸಾಧ್ಯತೆ ಇದೆ. 400 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸೇತುವೆ ನಿರ್ಮಾಣ ಆಗಿರುವುದರಿಂದ ಲೋಕಾರ್ಪಣೆಗೆ ಪ್ರಧಾನ ಮಂತ್ರಿ ಅವರನ್ನು ಕರೆಸುವ ಪ್ರಯತ್ನ ನಡೆಯುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಹಾಗೂ ತುಮರಿ ಸೇತುವೆ ನಿರ್ಮಾಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ಅಪಾರ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅನುದಾನ ನೀಡುವ ಮೂಲಕ ಕಾಮಗಾರಿ ಅನುಷ್ಠಾನಕ್ಕೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಸೇತುವೆಗಾಗಿ ಹಿನ್ನೀರಿನ ಜನರ ಹೋರಾಟ ಸ್ಮರಣೀಯ. ಎಲ್ಲರ ಪ್ರಯತ್ನದ ಫಲದಿಂದ ತುಮರಿ ಸೇತುವೆ ಕಾಮಗಾರಿ ಅಂತಿಮ ಹಂತ ತಲುಪಿದೆ. ಶೀಘ್ರವೇ ಲೋಕಾರ್ಪಣೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದರು.

ರಾಣೆಬೆನ್ನೂರು, ಶಿಕಾರಿಪುರ, ಆನಂದಪುರ, ಹೊಸನಗರ, ಬೈಂದೂರು ರಸ್ತೆ ಕಾಮಗಾರಿ ನಡೆಯುತ್ತಿದೆ. ಕೊಲ್ಲೂರು ಘಾಟ್‌ನಲ್ಲಿ 125 ತಿರುವುಗಳಿವೆ. ಪ್ರಯಾಣ ತೀರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆಗಳ ಜತೆಗೆ ನೇರ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಯೋತ್ಪಾದಕರ ಮಟ್ಟಹಾಕುವ ಕೆಲಸ ನಡೆಯುತ್ತಿದೆ. ದಾಳಿಯ ಹಿಂದೆ ಪಾಕಿಸ್ತಾನ ಇರುವುದು ಸಾಬೀತಾಗಿದೆ. ಉಗ್ರಗಾಮಿಗಳನ್ನು ಹೊಸಕಿಹಾಕಲು, ಪ್ರೇರಣೆ ನೀಡಿದ ಪಾಕಿಸ್ತಾನಕ್ಕೆ ಪಾಠ ಕಲಿಸಲು ಪ್ರಧಾನ ಮಂತ್ರಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. 1960ರ ಸಿಂಧೂ ನದಿ ಒಪ್ಪಂದ ಮುರಿದು, ನೀರು ನಿಲ್ಲಿಸಿದ್ದರಿಂದ ಪಾಕಿಸ್ತಾನ ದಿಕ್ಕೆಟ್ಟು ಹೋಗುವಂತೆ ಮಾಡಿದೆ. ನಮ್ಮ ನೀರು ಕುಡಿದು ನಮಗೇ ವಿಷ ಕಕ್ಕುವ ಕೆಲಸವನ್ನು ಪಾಕಿಸ್ತಾನ ಮಾಡಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಾಧ್ಯಮ ಪ್ರಮುಖ ಹು.ಭಾ.ಅಶೋಕ್ ಸುದ್ದಿಗೋಷ್ಠಿಯಲ್ಲಿದ್ದರು.