ಚಿಕ್ಕೂಡ್ಲಿಯಲ್ಲಿ ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿ ಬೈಪಾಸ್, ರಿಂಗ್ ರಸ್ತೆ, ಭದ್ರಾ ಸೇತುವೆಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಕೆ.ಜಿ.ಕುಮಾರಸ್ವಾಮಿ, ದತ್ತಾತ್ರಿ ಇತರರಿದರು.  
ನ್ಯೂಸ್

ಹೆದ್ದಾರಿ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ

ಶಿವಕುಮಾರ ಎಸ್.ಪಿ.

ಹೊಳೆಹೊನ್ನೂರು: ಹೆದ್ದಾರಿ ಬೈಪಾಸ್ ನಿರ್ಮಾಣದಿಂದ ಹೊಳೆಹೊನ್ನೂರಿನಲ್ಲಿ ಟ್ರಾಫಿಕ್ ಕಿರಿಕಿರಿಗೆ ಶಾಶ್ವತವಾಗಿ ಮುಕ್ತಿ ಸಿಕ್ಕಂತಾಗಿದೆ. ಈ ಮೂಲಕ ಈ ಭಾಗದ ಜನರ ದಶಕದ ಕನಸು ನನಸಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಮೀಪದ ಚಿಕ್ಕಕೂಡ್ಲಿಯಲ್ಲಿ ಮಂಗಳವಾರ ಶಿವಮೊಗ್ಗ-ಚಿತ್ರದುರ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ ಬೈಪಾಸ್, ರಿಂಗ್ ರಸ್ತೆ ಹಾಗೂ ಭದ್ರಾ ನದಿ ಹೊಸ ಸೇತುವೆ ಉದ್ಘಾಟಿಸಿ ಮಾತನಾಡಿದರು.

4-5 ವರ್ಷದಲ್ಲಿ ಕೇಂದ್ರದಿಂದ ಜಿಲ್ಲೆಗೆ 10 ಸಾವಿರ ಕೋಟಿ ರೂ.ಗಿಂತ ಅಧಿಕ ಅನುದಾನ ಹರಿದು ಬಂದಿದೆ. ಹೊಳೆಹೊನ್ನೂರಿನಲ್ಲಿ ಭದ್ರಾ ನದಿ ಸೇತುವೆ ಹಾಗೂ ಬೈಪಾಸ್ ನಿರ್ಮಾಣಕ್ಕೆ 80 ಕೋಟಿ ರೂ. ವೆಚ್ಚವಾಗಿದೆ. ಹತ್ತಾರು ವರ್ಷಗಳ ಹಿಂದೆ ಇದೇ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಹೈದರಾಬಾದ್ ಮೂಲದ ಗುತ್ತಿಗೆದಾರ ಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಕಾಮಗಾರಿ ವಿಳಂಬವಾಯಿತು. ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಕಾಮಗಾರಿ ಯಶ್ವಸಿಯಾಗಿದೆ ಎಂದರು.

ಹೊಳೆಹೊನ್ನೂರಿನಲ್ಲಿ ಭದ್ರಾವತಿ ರಸ್ತೆಗೆ 8.5 ಕೋಟಿ ರೂ. ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಹೆದ್ದಾರಿಯ ಹೊಳಲ್ಕೆರೆ ಹಾಗೂ ಶಿವಮೊಗ್ಗದಲ್ಲಿ ರೈಲ್ವೆ ಮೇಲ್ಸೆತುವೆ, ಚಿತ್ರದುರ್ಗ, ಚನ್ನಗಿರಿ ಹಾಗೂ ಹೊಳೆಹೊನ್ನೂರಿನಲ್ಲಿ ಬೈಪಾಸ್, ಭದ್ರಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ಹಾಗೂ ನಾಲ್ಕೈದು ಕಡೆಗಳಲ್ಲಿ ಅಂಡರ್ ಪಾಸ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಸಿಗಂದೂರು ಸೇತುವೆಯನ್ನು ಶೀಘ್ರವೇ ಉದ್ಘಾಟಿಸಲಾಗುವುದು. ಇದರಿಂದ ಕೊಲ್ಲೂರು ಸಂಪರ್ಕ ಸುಲಭವಾಗಲಿದೆ. ಜಿಲ್ಲೆಯಿಂದ ಹೊಳಲ್ಕೆರೆಗೆ ರೈಲ್ವೆ ಸಂಪರ್ಕ ಸಾಧಿಸಲಾಗುತ್ತಿದೆ. ಭದ್ರಾವತಿ ಉಕ್ಕು ಕಾರ್ಖಾನೆಯನ್ನು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪುನರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ರಸ್ತೆ ಸಂಪರ್ಕ ಜಾಲ ಹೆಚ್ಚಾದಂತೆ ರೈತರಿಗೆ ಹೆಚ್ಚಿನ ಅನುಕೂಲ ಆಗುವುದರಲ್ಲಿ ಎರಡು ಮಾತಿಲ್ಲ. ವಿಮಾನ ನಿಲ್ದಾಣ ಅಕ್ಕಪಕ್ಕದ ಜಿಲ್ಲೆಯವರಿಗೆ ಅನುಕೂಲವಾಗಿದೆ ಎಂದರು.

ಎಂಎಲ್‌ಸಿಗಳಾದ ಡಿ.ಎಸ್.ಅರುಣ್‌ಕುಮಾರ್, ಡಾ. ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಯುವ ಮೋರ್ಚಾ ಅಧ್ಯಕ್ಷ ಕಿರಣ್‌ಕುಮಾರ್, ಪ್ರಮುಖರಾದ ವೀರಭದ್ರಪ್ಪ ಪೂಜಾರ್, ಎಸ್.ದತ್ತಾತ್ರಿ, ಭದ್ರಾಪುರ ಗಿರೀಶ್, ಎಸ್.ಶ್ರೀನಿವಾಸ್, ಸಿದ್ದಪ್ಪ, ಬಾಳೋಜಿ ಬಸವರಾಜ್, ಡಿ.ಮಂಜುನಾಥ್, ಸುಬ್ರಮಣ್ಣಿ, ಉಜ್ಜಿನಪ್ಪ, ಎಂ.ಕುಬೇಂದ್ರಪ್ಪ, ರಾಜೇಶ್ ಪಾಟೀಲ್, ಕೆ.ಪಿ.ಕಿರಣ್‌ಕುಮಾರ್ ಇತರರಿದ್ದರು.