ಬೆಂಗಳೂರು: ಸ್ಯಾಂಡಲ್ವುಡ್ ನಟ ಉಪೇಂದ್ರ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸೋಮವಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಉಪೇಂದ್ರ ಪರ ವಕೀಲರು ಇಂದೇ ಈ ಕೇಸ್ನ ವಿಚಾರಣೆ ನಡೆಸುವಂತೆ ಮಾಡಿದ ಮನವಿಯನ್ನು ಇದೀಗ ನ್ಯಾಯಾಲಯ ನಿರಾಕರಿಸಿದೆ.
ನ್ಯಾಯಾಲಯಕ್ಕೆ ಇಂದೇ (ಆಗಸ್ಟ್ 16) ವಿಚಾರಣೆ ನಡೆಸುವಂತೆ ಉಪೇಂದ್ರ ಪರ ವಕೀಲರು ಮನವಿ ಮಾಡಿದರು. ಆದ್ರೆ, ಈ ಮನವಿಯನ್ನು ಆಲಿಸಿದ ಕೋರ್ಟ್, ವಿಚಾರಣೆ ನಡೆಸಲು ನಿರಾಕರಿಸಿದೆ. ಇದರ ಬದಲಿಗೆ ಆಗಸ್ಟ್ 17 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ನ್ಯಾ. ಹೇಮಂತ್, ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ಇದೀಗ ಈ ವಿಚಾರಣೆಯನ್ನು ಮುಂದೂಡಿದೆ.
ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಲು ಕಾರಣವೇನು?: ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ತದನಂತರ ಹಲಸೂರು ಪೊಲೀಸ್ ಸ್ಟೇಷನ್ನಲ್ಲಿ ಕೂಡ ಮತ್ತೊಂದು ದೂರು ದಾಖಲಾಗಿತ್ತು.
ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲಿಸುವುದರ ಜತೆಗೆ ವ್ಯಾಪಕ ವಿರೋಧ ಕೂಡ ವ್ಯಕಪಡಿಸಲಾಗಿತ್ತು. ಈ ಬೆನ್ನಲ್ಲೇ ನ್ಯಾಯಾಲಯದ ಮೊರೆ ಹೋದ ನಟ, ಎಫ್ಐಆರ್ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಉಪೇಂದ್ರ ಪರ ವಕೀಲರು ಇಂದು ಕೇಸ್ನ ವಿಚಾರಣೆ ನಡೆಸುವಂತೆ ಮಾಡಿದ ಮನವಿಗೆ, ಇದೀಗ ನ್ಯಾಯಾಲಯ ನಿರಾಕರಿಸುವ ಮುಖೇನ ವಿಚಾರಣೆಯನ್ನು ಮುಂದೂಡಿದೆ.