ನ್ಯೂಸ್

ಕೋಲಾರದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್

ಕಿರುವಾರ ಎಸ್.ಸುದರ್ಶನ್

ಕೋಲಾರ: ಮೈಸೂರು-ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ಹೈಸ್ಪೀಡ್ ರೈಲು ಯೋಜನೆ ಜಾರಿಗೊಂಡಿದ್ದು, ಜಿಲ್ಲೆಯ ಮೂಲಕ ಹಾದು ಹೋಗುವುದರಿಂದ ಯೋಜನೆ ಜಾರಿಗೆ ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮನವಿ ಮಾಡಿದರು.

ಚೆನ್ನೈ-ಮೈಸೂರು ಹೈ ಸ್ಪೀಡ್ ರೈಲು ಕಾರಿಡಾರ್‌ಗೆ ಪರಿಸರ ಮತ್ತು ಸಾಮಾಜಿಕ ಪರಿಗಣನೆಗಳ ಕುರಿತು ನಗರದ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಅತಿ ವೇಗದ ರೈಲು ಕಾರಿಡಾರ್ ಯೋಜನೆಯು 463.159 ಕಿಲೋ ಮೀಟರ್‌ಗಳ ಪರಮ ಆದ್ಯತೆಯ ಮಹತ್ವದ ಯೋಜನೆಯಾಗಿದೆ. ಕಾರಿಡಾರ್ ಚೆನ್ನೈನಿಂದ ಶುರುವಾಗಲಿದ್ದು, ಕೋಲಾರಕ್ಕೆ ಯಾವುದೇ ತೊಂದರೆಯಿಲ್ಲದೆ ಬುಲೆಟ್ ರೈಲು ಬರುವುದಕ್ಕೆ ಸಿದ್ಧವಿದೆ. ಪ್ರಸ್ತಾವಿತ ಮಾರ್ಗವು ಎತ್ತರಿಸಿದ ಸೇತುನಾಲೆಗಳು ಮತ್ತು ಸುರಂಗಗಳನ್ನು ಒಳಗೊಂಡಿದೆ. ಜತೆಗೆ ಕಾರಿಡಾರ್‌ಗೆ ಹೆಚ್ಚು ಜಮೀನು ಸ್ವಾಧೀನಪಡಿಸಿಕೊಳ್ಳದೆ ಮೀಟರ್ ಅಳತೆ ಮಾತ್ರ ಜಾಗ ತೆಗೆದುಕೊಳ್ಳಲಾಗುವುದು. ಅಲ್ಲದೇ ಟ್ರ‍್ಯಾಕ್ ಸಹ ಮೇಲೆ ಇರುತ್ತದೆ ಎಂದರು.
ಬೆAಗಳೂರು ವಿಮಾನ ನಿಲ್ದಾಣದಿಂದ ಕೆಜಿಎಫ್‌ಗೆ ಕೇವಲ ಅರ್ಧ ಗಂಟೆಯಲ್ಲಿ ಹೋಗಬಹುದು. ಕೋಲಾರದಿಂದ ಕೆಜಿಎಫ್‌ಗೆ 15 ನಿಮಿಷದಲ್ಲಿ ತಲುಪಬಹುದು. ಆದರೆ ಮಾರ್ಗವು ಜಿಲ್ಲೆಯ ರೈತರ ಹೊಲ-ಗದ್ದೆಗಳ ಮಧ್ಯೆ ಹಾದುಹೋಗಲಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯ. ಬುಲೆಟ್ ರೈಲು ಸಂಚಾರಕ್ಕೆ ಹಲವೆಡೆ ಯೋಜನೆ ಕೈಗೆತ್ತಿಕೊಂಡಿದ್ದು, ರಾಜ್ಯವನ್ನೂ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.

ಮೂರು ರಾಜ್ಯಗಳಿಗೆ ಸಂಪರ್ಕ
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು, ಈ ಮೂರು ರಾಜ್ಯಗಳನ್ನು ಸಂಪರ್ಕಿಸುವ ಯೋಜನೆ ಇದಾಗಿದ್ದು, ಯೋಜನೆ ಜಾರಿಯಿಂದ ಹೆಚ್ಚುವರಿಯಾಗಿ ಕೈಗಾರಿಕೆಗಳು ಬರುತ್ತವೆ. ಯೋಜನೆ ಜಾರಿಗೆ ರೈತರು ಸಹಕಾರ ನೀಡಿದಾಗ ಕಳೆದುಕೊಳ್ಳುವ ಜಾಗಕ್ಕೆ ಸರ್ಕಾರ ಪರಿಹಾರ ನೀಡುತ್ತದೆ. ರೈಲು ವಿನ್ಯಾಸದಲ್ಲಿ ಶಬ್ದ ಮತ್ತು ಕಂಪನಗಳನ್ನು ತೆಗೆಸುವ ಕ್ರಮಗಳನ್ನು ಅಳವಡಿಸಲಾಗುವುದು. ಜನನಿಬಿಡ ಮತ್ತು ನಗರ ಪ್ರದೇಶಗಳ ಮೂಲಕ ಮಾರ್ಗ ಹಾದು ಹೋಗುವಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗುವುದು ಎಂದು ಅಕ್ರಂಪಾಷಾ ಹೇಳಿದರು. ಸಭೆಯಲ್ಲಿ ನ್ಯಾಷನಲ್ ಹೈಸ್ಪೀಡ್ ರೈಲು ಕಾರ್ಪೋರೇಷನ್ ಲಿಮಿಟೆಡ್‌ನ ಜೆಜಿಎಂಎಸ್‌ಡಿ ಅನಿಲ್ ಶರ್ಮ, ಆರ್‌ಬಿ ಅಸೋಸಿಯೇಷನ್‌ನ ಪ್ರಾಜೆಕ್ಟ್ ಇಂಜಿನಿಯರ್ ಸಚ್ಚಿದಾನಂದ ಹಾಜರಿದ್ದರು.