ನಗರದ ಬಾಲ ನ್ಯಾಯ ಮಂಡಳಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ ಕೊಳ್ಳ ಉದ್ಘಾಟಿಸಿದರು. ಎಂ.ಸಂತೋಷ್, ಜಿ.ವಿ.ಹರಿಪ್ರಸಾದ್, ಎಸ್.ಆರ್.ಮಂಜುನಾಥ್, ಆರ್.ಮಂಜುನಾಥ್, ತಾಜುದ್ದೀನ್ ಖಾನ್ ಇದ್ದರು. 
ನ್ಯೂಸ್

ಶಿವಮೊಗ್ಗದಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣ ಆತಂಕಕಾರಿ

ಶಿವಮೊಗ್ಗ: ಶಿವಮೊಗ್ಗ ಮುಂದುವರಿದ ಜಿಲ್ಲೆ. ಆದರೆ ರಾಜ್ಯದಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಶಿವಮೊಗ್ಗದಲ್ಲಿ ವರದಿ ಆಗುತ್ತಿರುವುದು ಆತಂಕಕಾರಿಯಾಗಿದೆ. ಪೋಕ್ಸೋ ಮತ್ತು ಬಾಲ್ಯ ವಿವಾಹದ ಶೇ.90ರಷ್ಟು ಮಕ್ಕಳು ಸರ್ಕಾರಿ ಶಾಲೆಗಳ ಮಕ್ಕಳಾಗಿರುವುದು ಕೂಡ ಕಳವಳಕಾರಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ ಕೊಳ್ಳ ಆತಂಕ ವ್ಯಕ್ತಪಡಿಸಿದರು.

ನಗರದ ಬಾಲ ನ್ಯಾಯ ಮಂಡಳಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಶಾಲೆಯಲ್ಲಿದೆ ಶಿಕ್ಷಣದ ಜತೆ ರಕ್ಷಣೆ-ಆರ್‌ಟಿಇ ಕಾಯ್ದೆ 2009 ಅನುಷ್ಠಾನ ಕುರಿತು ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನಿಯಮಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ ನೋಡಲ್ ಇಲಾಖೆಯಾಗಿದೆ. ಆದರೆ ಇಲಾಖೆಯಿಂದ ಇದುವರೆಗೆ ಒಂದೂ ಎಫ್‌ಐಆರ್ ಆಗಿಲ್ಲ. ಯಾವುದೇ ಮಗು ಶಾಲೆಗೆ ಬರುತ್ತಿಲ್ಲ ಅಥವಾ ಏನಾದರೂ ಬದಲಾವಣೆ ಆಗಿದೆ ಎಂದರೆ ಮೊದಲು ಶಿಕ್ಷಕರಿಗೆ ಗೊತ್ತಾಗುತ್ತದೆ. ಮಕ್ಕಳ ವಿಷಯದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ. ಇನ್ಮುಂದೆ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆಗದಂತೆ ಶಿಕ್ಷಣ ಇಲಾಖೆ, ಸಂಸ್ಥೆಗಳು ಕ್ರಮ ವಹಿಸಬೇಕು. ಇದು ನಿಮ್ಮ ಬಹು ದೊಡ್ಡ ಜವಾಬ್ದಾರಿ ಕೂಡ ಆಗಿದೆ ಎಂದರು.

ರಾಜ್ಯದಲ್ಲಿ 18 ಲಕ್ಷ ವಿದ್ಯಾರ್ಥಿಗಳ ಅಪಾರ ಅಪ್‌ಡೇಟ್ ಆಗಿಲ್ಲ. 8 ಲಕ್ಷ ವಿದ್ಯಾರ್ಥಿಗಳ ವರದಿ ಮಿಸ್‌ಮ್ಯಾಚ್ ಆಗಿದೆ. ಜಿಲ್ಲೆಯಲ್ಲಿ 2.5 ಲಕ್ಷ ಮಕ್ಕಳ ಪೈಕಿ 50 ಸಾವಿರ ಮಕ್ಕ ಅಪ್‌ಡೇಟ್ ಆಗಿಲ್ಲ. ಶಿಕ್ಷಣ ಇಲಾಖೆಯನ್ನು ಇದಕ್ಕೆ ಹೊಣೆ ಮಾಡಬೇಕಾಗುತ್ತದೆ. ಇಲಾಖೆ ವಿದ್ಯಾರ್ಥಿಗಳ ದಾಖಲಾತಿಗಳನ್ನು ಸರಿಪಡಿಸಿ ಪಡೆಯಬೇಕು. ಸ್ಯಾಟ್ಸ್ ಅಪ್‌ಡೇಟ್ ಮಾಡಬೇಕು. ಜಿಲ್ಲೆಯಲ್ಲಿ ಡ್ರಾಪ್ ಔಟ್ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಕೆಲ ಸಾಮಾಜಿಕ ಪಿಡುಗಗಳಿಗೆ ಕಾರಣ ಶಾಲೆಯಿಂದ ಹೊರಗುಳಿದ ಮಕ್ಕಳು. ಆದ್ದರಿಂದ ಡ್ರಾಪ್‌ಔಟ್ ಅನ್ನು ತಗ್ಗಿಸಬೇಕು. ಗೈರು ಹಾಜರಾದ ಮಕ್ಕಳನ್ನು ಶಾಲೆಗೆ ಕರೆ ತರಬೇಕು. ಗುಣಮಟ್ಟದ ಆಹಾರವನ್ನೂ ನೀಡಬೇಕು ಎಂದು ಹೇಳಿದರು.

ಶಾಲೆಯಲ್ಲಿದೆ ಶಿಕ್ಷಣದ ಜತೆ ರಕ್ಷಣೆ ಮತ್ತು ಆರ್‌ಟಿಇ ಕಾಯ್ದೆ ಕುರಿತು ಡಯಟ್ ಕಾಲೇಜಿನ ಉಪನ್ಯಾಸಕ ಜಿ.ವಿ.ಹರಿಪ್ರಸಾದ್ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಸಂತೋಷ್, ಡಿಡಿಪಿಐ ಎಸ್.ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಜರಿದ್ದರು.