ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಗತ್ಯವಿರುವ ಬೀದಿಗಳಿಗೆ ಮಿನಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ನೇತೃತ್ವದಲ್ಲಿ ದೇಗುಲ ಆವರಣದಲ್ಲಿ ಶನಿವಾರ ರಾತ್ರಿ ಚಾಲನೆ ನೀಡಲಾಯಿತು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಈಗಾಗಲೇ ಬೇಲೂರು ಶ್ರೀ ಚನ್ನಕೇಶವಸ್ವಾಮಿ ಅವರ ರಥೋತ್ಸವದ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ. ದೇವರ ದರ್ಶನ ಪಡೆಯಲು ಭಕ್ತರು ಹಗಲು ರಾತ್ರಿ ಎನ್ನದೆ ಬರುತ್ತಾರೆ. ರಜಾ ದಿನಗಳಿರುವುದರಿಂದ ಬೇಲೂರಿನ ಸಂಬಂಧಿಕರು, ಸ್ನೇಹಿತರ ಮನೆಗಳಿಗೂ ಜನರು ಹೆಚ್ಚಾಗಿ ಬರುವುದರಿಂದ ಪಟ್ಟಣದ ಅಂದ ಹೆಚ್ಚಿಸುವುದು ನಮ್ಮ ಕರ್ತವ್ಯವಾಗಿದೆ. ಪಟ್ಟಣದ ಕೆಲವು ಭಾಗಗಳಲ್ಲಿ ಕತ್ತಲಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಚನ್ನಕೇಶವಸ್ವಾಮಿ ದೇಗುಲದ ಆವರಣ, ವಿಷ್ಣು ಸಮುದ್ರ ಕಲ್ಯಾಣಿ ಮತ್ತು ಹರ್ಡಿಂಕರ್ ವೃತ ಹಾಗೂ ಲಕ್ಷ್ಮಿಪುರ, ವೀರಾಜಂನೇಯಸ್ವಾಮಿ ದೇಗುಲ ಸೇರಿದಂತೆ ನಾಲ್ಕು ಭಾಗದಲ್ಲಿ ಮಿನಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿದ್ದೇವೆ. ಜತೆಗೆ ಪಟ್ಟಣಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದರು.
ಪುರಸಭಾ ಉಪಾಧ್ಯಕ್ಷೆ ಉಷಾ, ಸದಸ್ಯರಾದ ಜಗದೀಶ್, ಶ್ರೀನಿವಾಸ್, ಅಶೋಕ್, ಪಿಎಸ್‌ಐ ಶಿವನಾಂದ ಪಾಟೀಲ್, ಮುಖಂಡರಾದ ಗಿರೀಶ್, ಅನಂತು, ಎಸ್.ಕೆ.ನಾಗೇಶ್ ಸೇರಿದಂತೆ ಇತರರಿದ್ದರು.