ನ್ಯೂಸ್

ಯುವನಿಧಿ ನೋಂದಣಿ ಹೆಚ್ಚಿಸಲು ವ್ಯಾಪಕ ಪ್ರಚಾರಕ್ಕೆ ಸೂಚನೆ

ಬೆಂಗಳೂರು: ಶಿವಮೊಗ್ಗ ನಗರದಲ್ಲಿ ಜನವರಿ 12ರಂದು ಉದ್ಘಾಟನೆಯಾಗಲಿರುವ ಯುವನಿಧಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಉನ್ನತ ಮಟ್ಟದ ಸಭೆ ಗುರುವಾರ ವಿಧಾನಸೌಧದಲ್ಲಿ ನಡೆಯಿತು.

ಕೌಶಲ್ಯಾಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಶಿಕ್ಷಣ ಸಚಿವ ಮಧುಬಂಗಾರಪ್ಪ , ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಜರಿದ್ದು, ಅಧಿಕಾರಿಗಳಿಗೆ ವಿವಿಧ ಸೂಚನೆ ನೀಡಿದರು.

ಬಳಿಕ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಯುವನಿಧಿ ಯೋಜನೆಗೆ ಅರ್ಹ ಫಲಾನುಭವಿಗಳ ಹೆಸರುಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನೊಂದಾಯಿಸಲು ಅಗತ್ಯಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಮುಖವಾಗಿ ಪದವಿ ಕಾಲೇಜುಗಳು, ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರ ಜತೆಗೆ ಕೂಡಲೇ ಸಭೆ ನಡೆಸಿ ಗರಿಷ್ಠ ಪ್ರಮಾಣದಲ್ಲಿ ನೊಂದಣಿ ಮಾಡಿಸಬೇಕು ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರದ ಈ ಯೋಜನೆ ಪರಿಣಾಮಕಾರಿ ಅನುಷ್ಠಾನವಾಗಲು ಶಕ್ತಿ ಮೀರಿ ಪ್ರಯತ್ನ ಮಾಡಬೇಕು. ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು. ಯೋಜನೆಯಿಂದ ಸಿಗುವ ಲಾಭದ ಬಗ್ಗೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಯುವ ನಿಧಿ ಯೋಜನೆಗೆ ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದ ನೊಂದಣಿ ಆಗದಿರುವುದು ಸಚಿವರ ಗಮನಕ್ಕೆ ಬಂದಿದೆ. ಅಧಿಕಾರಿಗಳಿಂದ ಜಿಲ್ಲಾವಾರು ಮಾಹಿತಿ ಪಡೆದ ಸಚಿವ ಶರಣ್‌ಪ್ರಕಾಶ್ ಅವರಿಗೆ ಈ ಸಂಗತಿ ಅಚ್ಚರಿ ಮೂಡಿಸಿದ್ದು, ಕೂಡಲೇ ಹೆಚ್ಚು ಸಕ್ರಿಯರಾಗಿ ತೊಡಗಿಸಿಕೊಂಡು, ನೋಂದಣಿಗೆ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.

ಯುವ ನಿಧಿ ಯೋಜನೆಯ ಲಾಭ ಪಡೆದುಕೊಳ್ಳಲು ನಕಲಿ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ಸರ್ಕಾರ ಎಚ್ಚರ ವಹಿಸಿದೆ. ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸೂಚನೆ ನೀಡಿದ ಸಚಿವರು, ಅಭ್ಯರ್ಥಿಗಳ ನೊಂದಾಣಿ ವೇಳೆ ನಕಲಿ ಪ್ರಮಾಣಪತ್ರ ಸಲ್ಲಿಕೆ ಆಗದಂತೆ ನೋಡಿಕೊಳ್ಳಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳು ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜಿನ ಮಾನ್ಯತೆಯನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಪ್ರಮಾದ ಕಂಡು ಬಂದರೆ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಯೊಂದು ಕಾಲೇಜು ಮುಂಭಾಗ ಬೃಹತ್ ಪ್ರಮಾಣದ ಕಟೌಟ್, ಹೋರ್ಡಿಂಗ್ ಹಾಕಬೇಕು. ಅಲ್ಲದೇ, ಗ್ರಾಮ ಪಂಚಾಯತಿಗಳು ಮತ್ತು ಪ್ರತಿ ಗ್ರಾಮದಲ್ಲೂ ಊರಿನ ಮುಂಭಾಗ ಫ್ಲೆಕ್ಸೃ್ ಆಳವಡಿಸಲು ನಿರ್ದೇಶನ ನೀಡಿದರು.

ಸಭೆಯಲ್ಲಿ ಕೌಶಲ್ಯಭಿವೃದ್ದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ತ್ರಿಲೋಕ ಚಂದ್ರ, ಇಲಾಖಾ ಆಯುಕ್ತ ಹೇಮಂತ್ ನಿಂಬಾಳ್ಕರ್, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಎಂ.ಎಸ್.ಶ್ರೀಕರ್, ಕೌಶಲ್ಯಭಿವೃದ್ದಿ ಇಲಾಖೆಯ ಆಯುಕ್ತೆ, ಆರ್.ರಾಘಪ್ರಿಯ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.