ಪಕ್ಷಾಂತರ ನಿಷೇಧ ಕಾನೂನು ಪರಿಶೀಲನೆಗೆ ಸಂಬಂಧಿಸಿ ಲೋಕಸಭೆ ಸ್ಪಿಕರ್ ಅವರಿಂದ ರಚಿಸಲ್ಪಟ್ಟ ನಾಲ್ಕು ರಾಜ್ಯಗಳ ಸ್ಪೀಕರ್‌ಗಳ ಉನ್ನತ ಮಟ್ಟದ ಸಮಿತಿಯ 3ನೆ ಸಭೆ ಕರ್ನಾಟಕದಲ್ಲಿ ಜೂನ್ ಅಂತ್ಯಕ್ಕೆ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರು: ಪಕ್ಷಾಂತರ ನಿಷೇಧ ಕಾನೂನು ಪರಿಶೀಲನೆಗೆ ಸಂಬಂಧಿಸಿ ಲೋಕಸಭೆ ಸ್ಪಿಕರ್ ಅವರಿಂದ ರಚಿಸಲ್ಪಟ್ಟ ನಾಲ್ಕು ರಾಜ್ಯಗಳ ಸ್ಪೀಕರ್‌ಗಳ ಉನ್ನತ ಮಟ್ಟದ ಸಮಿತಿಯ 3ನೆ ಸಭೆ ಕರ್ನಾಟಕದಲ್ಲಿ ಜೂನ್ ಅಂತ್ಯಕ್ಕೆ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳು ಪದೇ ಪದೇ ಪಕ್ಷಾಂತರ ಮಾಡುವುದ್ನು ತಡೆಯಲು ಭಾರತದ ಸಂವಿಧಾನದ 10ನೆ ವಿಧಿಯನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಸ್ಫೀಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಒರಿಸ್ಸಾ, ನಾಗಾಲ್ಯಾಂಡ್ ರಾಜ್ಯಗಳ ಸ್ಫೀಕರ್‌ಗಳ ಸಮಿತಿ ಇದಾಗಿದ್ದು, ಈಗಾಗಲೇ ಮಹಾರಾಷ್ಟ್ರ ಮತ್ತು ಒರಿಸ್ಸಾದಲ್ಲಿ ಸಮಿತಿ ಸಭೆ ನಡೆದಿದೆ. ಚುನಾಯಿತ ಜನಪ್ರತಿನಿಧಿ ಪಕ್ಷಾಂತರಗೊಂಡಾಗ ಅರ್ಹತೆಯನ್ನು ಖಾತರಿಪಡಿಸುವುದು, ಪಕ್ಷದ ಜತೆಯಲ್ಲಿ ಇಲ್ಲದ ಸಂದರ್ಭದಲ್ಲಿ ವಿಶ್ವಾಸ ಮತದಲ್ಲಿ ಭಾಗವಹಿಸುವ ಅವಕಾಶವನ್ನು ನಿರಾಕರಿಸುವುದು, ಪಕ್ಷಾಂತರ ಗೊಂಡ ಶಾಸಕರಿಗೆ ಸಚಿವ ಹುದ್ದೆ ಅಥವಾ ನಿಗಮ, ಮಂಡಳಿಯಲ್ಲಿ ಸ್ಥಾನ ಮಾನ ಮಾಡಬಾರದು ಎಂಬ ಕುರಿತಾದ ಶಿಫಾರಸುಗಳ ಬಗ್ಗೆ ಚರ್ಚೆ ನಡೆದಿದೆ. ಅಂತಿಮ ಸಭೆ ಕರ್ನಾಟಕದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬಳಿಕ ಸಮಿತಿ ತನ್ನ ವರದಿಯನ್ನು ಲೋಕಸಭೆಗೆ ಮಂಡಿಸಲಿದೆ ಎಂದರು.
ಮರು ಎಣಿಕೆ ಬಳಿಕ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಜೀವರಾಜ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ನಮ್ಮಿಂದ ಯಾವುದೇ ವಿಳಂಬವಾಗಿಲ್ಲ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ವಿಶ್ವಾಸದಲ್ಲಿ ನಡೆಯಬೇಕೇ ಹೊರತು ಆರೋಪದ ಮೂಲಕ ಅಲ್ಲ ನಿಯಮಾವಳಿ ಪ್ರಕಾರ ಅಭಿಪ್ರಾಯ ಪಡೆದು ಸಮಯ ನೀಡಲಾಗುತ್ತದೆ. ಅಷ್ಟರಲ್ಲೆ ವಿಳಂಬವಾಗಿದೆ ಎನ್ನುವುದು ಸರಿಯಲ್ಲ. ಸಂವಿಧಾನ ಮತ್ತು ಕಾನೂನಿನಡಿ ಅವಕಾಶ ಕೊಡಲೇಬೇಕು. ಇದೊಂದು ವಿಶೇಷ ಸನ್ನಿವೇಶ. ವಿಳಂಬ ಮಾಡುವ ಉದ್ದೇಶವೇ ಇಲ್ಲ. ಆದರೆ ಸಂವಿಧಾನ ಪೀಠದ ಬಗ್ಗೆ ಸಂಶಯ, ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ಚರ್ಚಿಸುವುದು, ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯಪಾಲರು ಕರೆ ಮಾಡಿ ಮಾತನಾಡಿದ್ದು, ತಡ ಆಗಿಲ್ಲ ಎಂಬುದನ್ನು ಅವರಿಗೆ ತಿಳಿಸಲಾಗಿದೆ ಎಂದವರು ಹೇಳಿದರು.