ವಿಶ್ವ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಪೂಜಾ, ಮಹಿಳಾ ರಿಲೇ ತಂಡಕ್ಕೆ ನಿರಾಸೆ 
ನ್ಯೂಸ್

ವಿಶ್ವ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಪೂಜಾ, ಮಹಿಳಾ ರಿಲೇ ತಂಡಕ್ಕೆ ನಿರಾಸೆ

ಯುಜೀನ್​: ಸೀನಿಯರ್​ ರಾಷ್ಟ್ರೀಯ ದಾಖಲೆ ಹೊಂದಿರುವ ಪೂಜಾ ಸಿಂಗ್​ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನ (

World Athletics U20 Championship

) ಮಹಿಳೆಯರ ಹೈಜಂಪ್​ ಸ್ಪರ್ಧೆಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟು ನಿರಾಸೆ ಮೂಡಿಸಿದ್ದಾರೆ. ಮಹಿಳೆಯರ 4/400 ಮೀ. ರಿಲೇ ಸ್ಪರ್ಧೆಯಲ್ಲೂ ಭಾರತ ತಂಡ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಇದರೊಂದಿಗೆ ಭಾರತ ಕೂಟದಲ್ಲಿ 2 ಬೆಳ್ಳಿ, 1 ಕಂಚಿನ ಸಹಿತ ಒಟ್ಟು 3 ಪದಕಗಳೊಂದಿಗೆ ಅಭಿಯಾನ ಮುಕ್ತಾಯಗೊಳಿಸಿತು. ಅಮೆರಿಕ 12 ಚಿನ್ನ, 7 ಬೆಳ್ಳಿ, 5 ಕಂಚಿನ ಸಹಿತ 24 ಪದಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದರೆ, ಭಾರತ ಪದಕಪಟ್ಟಿಯಲ್ಲಿ 27ನೇ ಸ್ಥಾನ ಗಳಿಸಿತು. ಭಾರತ 2021, 2022ರ ಆವೃತ್ತಿಯಲ್ಲೂ ತಲಾ 3 ಪದಕ ಗೆದ್ದುಕೊಂಡಿತ್ತು.

19 ವರ್ಷದ ಪೂಜಾ ಕೂಟದ ಕೊನೇ ದಿನವಾದ ಭಾನುವಾರ ನಡೆದ ಸ್ಪರ್ಧೆಯಲ್ಲಿ ಗರಿಷ್ಠ 1.84 ಮೀ. ಎತ್ತರವನ್ನು ಮಾತ್ರ ದಾಟುವಲ್ಲಿ ಯಶಸ್ವಿಯಾದರು. 1.93 ಮೀ. ಎತ್ತರ ಹಾರಿದ ರಾಷ್ಟ್ರೀಯ ದಾಖಲೆ ಹೊಂದಿರುವ ಅವರು, 1.87 ಮೀ. ಎತ್ತರ ಜಿಗಿಯುವ ಮೂರೂ ಪ್ರಯತ್ನದಲ್ಲಿ ವಿಫಲರಾದರು. ಆಸ್ಟ್ರೆಲಿಯಾದ ಇಜೊಬೆಲ್​ ಲೌಸನ್​ ರೋಯಿ 1.92 ಮೀ. ಎತ್ತರ ಹಾರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಹಂಗೆರಿಯ ಲಿಲಿಯಾನ್ನಾ ಬಟೋರಿ (1.90 ಮೀ.) ಬೆಳ್ಳಿ ಮತ್ತು ಸ್ಪೇನ್​ನ ಐಟನಾ ಅಲೊನ್ಸೊ (1.90 ಮೀ.) ಕಂಚು ಜಯಿಸಿದರು.

ಭೂಮಿಕಾ, ತಹುರ ಖತುನ್​, ತನು ಚೌಧರಿ, ಥಿಯಾ ಆರುಮುಗಂ ಒಳಗೊಂಡ ಭಾರತದ 4/400 ಮೀ. ಮಹಿಳಾ ರಿಲೇ ತಂಡ 3 ನಿಮಿಷ, 45.28 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕೊನೇ ಸ್ಥಾನಕ್ಕೆ ಕುಸಿಯಿತು. ಅಮೆರಿಕ, ಆಸ್ಟ್ರೆಲಿಯಾ, ಬ್ರಿಟನ್​ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಜಯಿಸಿತು.

ಕೂಟದಲ್ಲಿ ಭಾರತಕ್ಕೆ ಜಾವೆಲಿನ್​ ಎಸೆತದಲ್ಲಿ ಆಶಿಶ್​ ಯಾದವ್​, ಹೈಜಂಪ್​ನಲ್ಲಿ ಬಸಂತ್​ ಕುಮಾರ್​ ಮೇವಾಲ್​ ಬೆಳ್ಳಿ ಮತ್ತು ಲಾಂಗ್​ಜಂಪ್​ನಲ್ಲಿ ಶಹನವಾಜ್​ ಖಾನ್​ ಕಂಚು ಗೆದ್ದುಕೊಟ್ಟಿದ್ದರು. ಭಾರತ ಈ ಕೂಟದಲ್ಲಿ 2002ರಿಂದ 2018ರವರೆಗೆ 4 ಪದಕವನ್ನಷ್ಟೇ ಗೆದ್ದಿತ್ತು.