ನ್ಯೂಸ್

ದ್ವೇಷ ಭಾಷಣ ಆರೋಪ ತೇಜಸ್ವಿ ವಿರುದ್ಧ ಪ್ರಕರಣಕ್ಕೆ ‘ಹೈ’ ಮಧ್ಯಂತರ ತಡೆ

ಬೆಂಗಳೂರು : ನಗರ್ತಪೇಟೆಯಲ್ಲಿ ಮುಖೇಶ್ ಎಂಬ ಯುವಕನ ಮೇಲೆ ಹಲ್ಲೆ ಖಂಡಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ಸಂಸದ ತೇಜಸ್ವಿ ಸೂರ್ಯ ವಿರುದ್ಧದ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ನ್ಯಾಯಪೀಠ, ಇಡೀ ಊರಲ್ಲಿ ಪ್ರತಿಭಟನೆ ನಡೆಸಿದರೆ ಜನ ಓಡಾಡಬೇಡವೇ ಎಂದು ಅರ್ಜಿದಾರರ ಪರ ವಕೀಲ ಪ್ರಸನ್ನ ಕುಮಾರ್ ಅವರನ್ನು ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಯಿಸಿದ ಪ್ರಸನ್ನ ಕುಮಾರ್ ಯಾವುದೇ ಕಾನೂನುಬಾಹಿರ ಕೃತ್ಯ ನಡೆದಿಲ್ಲ. ಒಂದೆಡೆ ಸೇರಿ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ವಾದ ಮಂಡಿಸಿದರು.

ವಾದ ಆಲಿಸಿದ ನ್ಯಾಯ ಪೀಠ, ಸಿಎಂ ವಿರುದ್ಧ ಪ್ರತಿಭಟನೆ ಸಂಬಂಧದ ಪ್ರಕರಣಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸುಪ್ರೀಂಕೋರ್ಟ್ ನೀಡುವ ತೀರ್ಪು, ತೇಜಸ್ವಿ ಸೂರ್ಯ ಕೇಸ್‌ಗೂ ಅನ್ವಯವಾಗಬಹುದು. ಹೀಗಾಗಿ ತೇಜಸ್ವಿ ಸೂರ್ಯ ವಿರುದ್ಧದ ಕೇಸ್‌ಗೆ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ಆದೇಶ ಹೊರಡಿಸಿದರು.

ಏನಿದು ಪ್ರಕರಣ?:

ಬೆಂಗಳೂರಿನ ನಗರ್ತಪೇಟೆಯಲ್ಲಿರುವ ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಮೇಲೆ ನಡೆದಿದ್ದ ಹಲ್ಲೆ ಖಂಡಿಸಿ ಕಳೆದ ಮಂಗಳವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ತೇಜಸ್ವಿ ಸೂರ್ಯ, ಮತೀಯ ಭಾವನೆ ಕೆರಳಿಸುವಂತೆ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಚಿಕ್ಕಪೇಟೆ ನಿವಾಸಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಬಳಿಕ ಆಯೋಗದ ಸೂಚನೆ ಮೇರೆಗೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ರದ್ದು ಕೋರಿ ತೇಜಸ್ವಿ ಸೂರ್ಯ ಹೈಕೋರ್ಟ್ ಮೇಟ್ಟಿಲೇರಿದ್ದರು.