ಮದುವೆ ವಢಳೆ ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವರನಿಗೆ ಚಪ್ಪಲಿ ಏಟು?  
ನ್ಯೂಸ್

ಮದುವೆ ಮಂಟಪದಲ್ಲೇ ಹೈಡ್ರಾಮಾ; ವರನಿಗೆ ಚಪ್ಪಲಿಯಿಂದ ಹೊಡೆದ ವಧು? ಮದುಮಗಳಿಲ್ಲದೆ ದಿಬ್ಬಣ ವಾಪಸ್ ! | Bride Beats Groom

Bride Beats Groom: ಮದುವೆ ಮನೆ ಅಂದ್ರೆ ಸಂಭ್ರಮ, ನಗು, ಖುಷಿ ಇರಬೇಕು. ಆದ್ರೆ ಮಧ್ಯಪ್ರದೇಶದ ಶಾಜಾಪುರದಲ್ಲಿ ಮದುವೆಯ ಸಂಪ್ರದಾಯವೊಂದು ಗಲಾಟೆಗೆ ತಿರುಗಿದ್ದು, ವರನಿಗೆ ವಧು ಚಪ್ಪಲಿಯಿಂದ ಹೊಡೆದಿದ್ದಾಳೆ ಎನ್ನಲಾದ ಘಟನೆ ನಡೆದಿದೆ. ಚಪ್ಪಲಿ ಕದ್ದಾಟದ ಸಂಪ್ರದಾಯದ ವೇಳೆ ಹಣದ ವಿಚಾರವಾಗಿ ಇಬ್ಬರ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ವಧುವಿಲ್ಲದೆ ವರನ ಕಡೆಯವರು ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.

ಶಾಜಾಪುರದ ಅನುರಾಗ್ ಯಾದವ್ (23) ಮತ್ತು ಯೋಗಿತಾ ಖೇರ್ ಅವರ ಮದುವೆ ನವೆಂಬರ್ 20, 2026ರಂದು ನಡೆದಿದೆ. ಸುಮಾರು 7–8 ತಿಂಗಳ ಹಿಂದೆಯೇ ಇವರ ಮದುವೆ ಸಂಬಂಧ ನಿಶ್ಚಯವಾಗಿತ್ತು. ಮದುವೆಯ ಶಾಸ್ತ್ರಗಳು ಯಾವುದೇ ಸಮಸ್ಯೆಯಿಲ್ಲದೆ ಮುಗಿದಿದ್ದವು.

25 ಸಾವಿರ ರೂ. ಕೇಳಿದ ವಧುವಿನ ಕಡೆಯವರು?

ವಧುವನ್ನು ಗಂಡನ ಮನೆಗೆ ಕಳುಹಿಸುವ ವಿದಾಯದ ಸಮಯದಲ್ಲಿ, ಚಪ್ಪಲಿ ಕದಿಯುವ ಸಂಪ್ರದಾಯದ ವೇಳೆ ವಧುವಿನ ಕಡೆಯವರು 25 ಸಾವಿರ ಹಣ ರೂ. ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ವರನ ಕಡೆಯವರು 1,100 ರೂ. ಕೊಡಲು ಮುಂದಾಗಿದ್ದು, ಹಣದ ವಿಚಾರವಾಗಿ ಎರಡೂ ಕಡೆಯವರ ನಡುವೆ ಒಪ್ಪಂದವಾಗಿಲ್ಲ. ಇದೇ ವಿಚಾರ ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದೆ.

ವರನಿಗೆ ಚಪ್ಪಲಿಯಿಂದ ಹೊಡೆದ ವಧು?

ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ವಧು ವರನಿಗೆ ಚಪ್ಪಲಿಯಿಂದ ಹೊಡೆದಿದ್ದು ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ವಧು ವರನ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ. ಬಳಿಕ ವಧುವನ್ನು ಕರೆದುಕೊಂಡು ಹೋಗದೆ ವರನ ಕಡೆಯವರು ಮದುವೆ ಮೆರವಣಿಗೆಯೊಂದಿಗೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ.

ವರನ ಕಡೆಯವರ ವಿರುದ್ಧ ಕೇಸ್​

ವಧುವಿನ ಮಾವ ಹಾಗೂ ಬಿಜೆಪಿ ಕೌನ್ಸಿಲರ್ ಸುನಿಲ್ ನೀಡಿದ ದೂರಿನ ಆಧಾರದ ಮೇಲೆ ಶಾಜಾಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ವರನ ಕಡೆಯವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 296(B), 115(2), 351(3) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ವರನ ಕಡೆಯವರು ತಮ್ಮ ದೂರಿನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಬಿಜೆಪಿ ಕೌನ್ಸಿಲರ್ ಅವರ ರಾಜಕೀಯ ಪ್ರಭಾವದಿಂದ ತಮ್ಮ ದೂರನ್ನು ನಿರ್ಲಕ್ಷಿಸಲಾಗಿದೆ ಎಂಬುದು ವರನ ಕಡೆಯವರ ಆರೋಪವಾಗಿದೆ.

ಇದನ್ನೂ ಓದಿ:ನಿಯತ್ತಿಗೆ ಇನ್ನೊಂದು ಹೆಸ್ರೇ ನಾಯಿ! ಮಾಲೀಕನ ಜೀವ ಉಳಿಸಿದ ಹಾಲಿಗೆ ಶೌರ್ಯ ಪ್ರಶಸ್ತಿ | Holly Dog Award

ಘಟನೆಯ ವಿಡಿಯೋ ಮತ್ತು ಎರಡೂ ಕಡೆಯವರ ಆರೋಪಗಳು ಇದೀಗ ಚರ್ಚೆಗೆ ಕಾರಣವಾಗಿವೆ. ಪ್ರಕರಣದ ಸಂಪೂರ್ಣ ವಿವರ ಹಾಗೂ ಪೊಲೀಸರ ಮುಂದಿನ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. (ಏಜೆನ್ಸೀಸ್)