- ನಾಡಗೀತೆ ಕುರಿತ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
- ಬೇರೆ ರೀತಿ ಹಾಡಲು ನಿರ್ಬಂಧವೇನೂ ಇಲ್ಲ ಎಂದ ನ್ಯಾಯಾಲಯ
ಬೆಂಗಳೂರು: ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯ ಪ್ರಕಾರವೇ ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ಹೈಕೋರ್ಟ್ ವಜಾಗೊಳಿಸಿದೆ.
ಸೋಮವಾರ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿದೆ. ರ್ನಿದಿಷ್ಟ ರಾಗದಲ್ಲಿ ಹಾಡಬೇಕು ಎಂದು ಸರ್ಕಾರದ ಆದೇಶ ಹೊರಡಿಸಿದೆ. ಅದರಲ್ಲಿ ಅರ್ಜಿದಾರರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಉಂಟು ಮಾಡಿಲ್ಲ. ಅರ್ಜಿದಾರರಿಗೆ ಬೇಕಾದಂತೆ ಹಾಡಲು ಅವರನ್ನು ಯಾರೂ ತಡೆಯುತ್ತಿಲ್ಲ. ಅದಕ್ಕೆ ಸರ್ಕಾರ ನಿಷೇಧ ವಿಧಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ನಾಡಗೀತೆಯ ಎರಡು ಚರಣಗಳಿಗೆ ಮಾತ್ರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ್ದಾರೆ. ಈ ಸಂಬಂಧ 2013 ಮತ್ತು 2014ರಲ್ಲಿ ಎರಡು ಸಮಿತಿಗಳನ್ನು ಮಾಡಲಾಗಿದ್ದರೂ ಅವುಗಳ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸಿಲ್ಲ. ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳನ್ನು ಪಡೆಯದೇ ಸರ್ಕಾರ ಈ ಆದೇಶ ಹೊಡಿಸಿದೆ ಎಂದರು. ನಾಡಗೀತೆಗೆ ಒಂದೇ ರೀತಿಯಲ್ಲಿ ರಾಗ ಸಂಯೋಜಿಸಲಾಗಿಲ್ಲ. ಆದರೂ ಸರ್ಕಾರ ಆಕ್ಷೇಪಾರ್ಹ ಆದೇಶ ಹೊರಡಿಸಿದೆ. ರಾಷ್ಟ್ರಗೀತೆಗೂ ಕೂಡ ರ್ನಿದಿಷ್ಟ ರಾಗದಲ್ಲೇ ಹಾಡುವಂತೆ ನಿಯಮಗಳಿಲ್ಲ. ಹಾಗಿರುವಾಗ ನಾಡಗೀತೆಗೆ ರಾಗ ಸಂಯೋಜಿಸಲೂ ಸರ್ಕಾರಕ್ಕೆ ಅಧಿಕಾರವಿಲ್ಲ. ಎರಡು ಚರಣಗಳಿಗೆ ಸಂಯೋಜಿಸಿರುವ ರಾಗವನ್ನು ಇಡೀ ಗೀತೆಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಸರ್ಕಾರ ನಿರ್ಬಂಧಿಸಿಲ್ಲ:
ಅರ್ಜಿದಾರರ ವಾದಗಳನ್ನು ನಿರಾಕರಿಸಿದ ನ್ಯಾಯಪೀಠ, ಸರ್ಕಾರದ ಆದೇಶದಲ್ಲಿ ಯಾವುದೇ ಸ್ವೇಚ್ಛೇಯ ಕ್ರಮವಿಲ್ಲ. ನಿಮಗೆ ಬೇಕಾದಂತೆ ಹಾಡುವುದನ್ನು ಯಾರೂ ತಡೆದಿಲ್ಲ. ಸಂವಿಧಾನದಲ್ಲಿಯೇ ನಿಮಗೆ ಆ ಹಕ್ಕಿದೆ. ಸರ್ಕಾರದ ಆದೇಶವು ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಹೇಳಿತು. ಅಲ್ಲದೆ, ನಿಮ್ಮ ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಲಾಗುವುದು. ಕಾರಣಗಳನ್ನು ಆದೇಶದಲ್ಲಿ ನೀಡಲಾಗುವುದು ಎಂದಿತು. ತೀರ್ಪಿನ ವಿಸತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ನಾಡಗೀತೆಯನ್ನು ಮೈಸೂರು ಅನಂತ ಸ್ವಾಮಿ ಅವರ ರಾಗ ಸಂಯೋಜನೆಯಂತೆ 2 ನಿಮಿಷ 30 ಸೆಕೆಂಡ್ಗಳಲ್ಲಿ ಹಾಡಬೇಕು ಎಂದು ರಾಜ್ಯ ಸರ್ಕಾರ 2022ರ ಸೆ.25ರಂದು ಆದೇಶ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸಿ. ಅಶ್ವತ್ ಅವರು ನಾಡಗೀತೆಗೆ ಸಂಪೂರ್ಣವಾಗಿ ರಾಗ ಸಂಯೋಜಿಸಿದ್ದು, ಅದನ್ನು ಬಳಸಬೇಕು ಎಂದು ವಾದಿಸಿದ್ದರು. ಆದರೆ, ಏಕಸದಸ್ಯ ನ್ಯಾಯಪೀಠ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಇದನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿತ್ತು.