ನ್ಯೂಸ್

ಸಕ್ಕರೆಗೆ ಶೇ.20 ಸೆಣಬಿನ ಚೀಲಗಳ ಬಳಕೆ: ಕೇಂದ್ರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಸೆಣಬಿನ ಕಚ್ಚಾ ಪದಾರ್ಥಗಳಿಂದ ಸಿದ್ದಪಡಿಸಿರುವ ಚೀಲಗಳಿಂದ ಪ್ಯಾಕಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿರುವ ಸೆಣಬಿನ ಪ್ಯಾಕೇಜಿಂಗ್ ಸಾಮಗ್ರಿಗಳ (ಪ್ಯಾಕಿಂಗ್ ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ ಅಡಿಯಲ್ಲಿ ಹೊರಡಿಸಿರುವ ಅಧಿಸೂಚನೆ ಎತ್ತಿಹಿಡಿದಿರುವ ಹೈಕೋರ್ಟ್, ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಸಕ್ಕರೆ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳ ಬಳಕೆ ಸಂಬಂಧ ಕಾಯ್ದೆ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗಳನ್ನು ಪ್ರಶ್ನಿಸಿ ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ಮತ್ತು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಸುಪ್ರೀಂಕೋರ್ಟ್‌ನ ಆದೇಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕಚ್ಚಾ ಸೆಣಬಿನ ಬೆಳಗಾರರು ಮತ್ತು ಕಾರ್ಮಿಕರಿಗೆ ಸಾಮಾಜಿಕ - ಆರ್ಥಿಕ ನ್ಯಾಯ ಒದಗಿಸುವ ಉದ್ದೇಶದಿಂದ ಈ ನೀತಿಯನ್ನು ಜಾರಿ ಮಾಡಲಾಗಿದೆ. ಇದು ರಾಜ್ಯ ನೀತಿ ನಿರ್ದೇಶನ ತತ್ವಗಳ ಅಡಿಯಲ್ಲಿ ಸಂವಿಧಾನ ಒದಗಿಸಿರುವ ಒಂದು ಸೌಲಭ್ಯವಾಗಿದೆ. ಶೇ.100ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಿಂದ ಬಳಕೆ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಇದೀಗ ಶೇ.20ರಷ್ಟು ಬಳಸಬೇಕು ಎಂಬ ಅಧಿಸೂಚನೆಯನ್ನು ಪ್ರಶ್ನಿಸುವುದನ್ನು ಪರಿಗಣಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ. ಆದ್ದರಿಂದ ಕೇಂದ್ರ ಸರ್ಕಾರದ ಆದೇಶದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.