ನ್ಯೂಸ್

ಮಹೇಶ್ ಶೆಟ್ಟಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ

ಬೆಂಗಳೂರು: ಡಾ. ಡಿ.ವೀರೇಂದ್ರ ಹೆಗ್ಗಡೆ, ಅವರ ಕುಟುಂಬ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡದಂತೆ ಹೈಕೋರ್ಟ್ ಮಹೇಶ್ ಶೆಟ್ಟಿ ತಿಮರೋಡಿ ಜತೆಗೆ ಅವರ ಅನುಯಾಯಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿ ಆರ್.ದೇವದಾಸ್ ಅವರ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ. ಅಲ್ಲದೆ, ಸಾರ್ವಜನಿಕ ಸಭೆಗಳಲ್ಲಾಗಲಿ ಸಾಮಾಜಿಕ ಮಾಧ್ಯಮಗಳಲ್ಲಾಗಲಿ ಡಾ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬ, ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಅಪಪ್ರಚಾರ ಮಾಡದಂತೆ ತಾಕೀತು ಮಾಡಿದೆ.

ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ, ಮಾನಹಾನಿ ಮಾಡಿದ್ದಲ್ಲದೇ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಮೂರ್ತಿಗಳ ವಿರುದ್ಧ ನಿಂದನೆ ಮಾತುಗಳನ್ನಾಡಿರುವ ಬಗ್ಗೆ ಪೀಠ ತೀವ್ರ ಅಸಮಾಧಾನ ಹೊರಹಾಕಿದೆ.

ಈ ವಿಚಾರವಾಗಿ ಮಹೇಶ್ ಶೆಟ್ಟಿ ನ್ಯಾಯಾಲದಲ್ಲಿ ಬೇಷರತ್ ಕ್ಷಮೆಯಾಚಿಸಿದರು. ತಮ್ಮ ವರ್ತನೆ ಸರಿಪಡಿಸಿಕೊಂಡಿಲ್ಲ ಎಂದಿರುವ ಹೈಕೋರ್ಟ್, ಇದು ಹೀಗೆ ಮುಂದುವರಿದಲ್ಲಿ ಕಾನೂನಿನಡಿಯಲ್ಲಿ ತಕ್ಷಣ ಕ್ರಮ ಜರಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.