High court 
ನ್ಯೂಸ್

ಎನ್​ಐಎ ಕೋರ್ಟ್​ಗಿದೆ ಬಂಧನ ಆದೇಶ ಅಧಿಕಾರ| High court

ಪ್ರಮುಖ ಮುಖ್ಯಾಂಶಗಳು

  • ವ್ಯಾಪ್ತಿಗೆ ಆಕ್ಷೇಪವೆತ್ತಿದ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್​
  • ನ್ಯಾಯಾಲಯದ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಆರೋಪಿಗಳು
ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಬಂಧನ (ರಿಮ್ಯಾಂಡ್​) ಆದೇಶಗಳನ್ನು ಹೊರಡಿಸುವ ಅಧಿಕಾರ ಇದೆ ಎಂದು 2023ರಲ್ಲಿ ವಿಭಾಗೀಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಹೈಕೋರ್ಟ್​ ಎತ್ತಿಹಿಡಿದಿದೆ.
ನಿಷೇಧಿತ ಪಿಎಫ್ಐ ಸಂಟನೆಯ ಸದಸ್ಯರೆಂಬ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮಂಗಳೂರಿನ ಮಹಮ್ಮದ್​ ಬಿಲಾಲ್​ ಮತ್ತು ಇತರ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್​. ಸುನೀಲ್​ ದತ್​ ಯಾದವ್​ ಮತ್ತು ವಿಜಯ್​ ಕುಮಾರ್​ ಎ. ಪಾಟೀಲ್​ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಸರ್ಕಾರದ ಅಧಿಸೂಚನೆಯಲ್ಲಿನ ತಾಂತ್ರಿಕ ಲೋಪಗಳನ್ನು ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಆದ್ದರಿಂದ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯವು 2012ರಿಂದಲೇ ಅಸ್ತಿತ್ವದಲ್ಲಿದೆ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರತಿಭಟನೆಯ ನೆಪದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳ ಮೇಲೆ ದಾಳಿ ನಡೆಸಲು ಸಂಚು ನಡೆಸಿದ್ದಾರೆ ಎಂಬ ಆರೋಪದಲ್ಲಿ ಮಹಮ್ಮದ್​ ಬಿಲಾಲ್​, ಮಹಮ್ಮದ್​ ರಫಿಕ್​ ಅಲಿಯಾಸ್​ ಶಾರ್ಟ್​ ರಫಿಕ್​, ಅಬ್ಬಾಸ್​, ಅಕ್ಬರ್​ ಸಿದ್ದಿಕಿ ಮತ್ತು ಉಳ್ಳಾಲದ ಮಹಮ್ಮದ್​ ರಫಿಕ್​ ಎಂಬ ಐವರನ್ನು 2022ರ ಅ.13ರಂದು ಮಂಗಳೂರು ನಗರ ಪೋಲಿಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಾಗಿತ್ತು. ಕೇಂದ್ರ ಸರ್ಕಾರವು ಪಿಎಫ್​ಐ ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು.  

ಅಧಿಕಾರ ವ್ಯಾಪ್ತಿಗೆ ಆಕ್ಷೇಪ:

ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯ, ಆರೋಪಿಗಳ ಬಂಧನ ಅವಧಿಯನ್ನು 90ರಿಂದ 180 ದಿನಗಳಿಗೆ ವಿಸ್ತರಿಸಿತ್ತು. ಹಾಗೆಯೇ ಆರೋಪಿಗಳಿಗೆ ಡಿಫಾಲ್ಟ್ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಎನ್​ಐಎ ಬದಲಿಗೆ ರಾಜ್ಯದ ಪೊಲೀಸರು ನಡೆಸಿರುವುದರಿಂದ ಮಂಗಳೂರಿನ ಸೆಷನ್ಸ್​ ನ್ಯಾಯಾಲಯದಲ್ಲೇ ವಿಚಾರಣೆ ನಡೆಯಬೇಕಿತ್ತು. ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು. 
ಈ ಅರ್ಜಿಯನ್ನು 2023ರ ಏ.21ರಂದು ವಿಭಾಗೀಯ ನ್ಯಾಯಪೀಠ ತಿರಸ್ಕರಿಸಿತ್ತು. 2012ರ ಜು.19ರಂದು ಹೊರಡಿಸಲಾದ ಸರ್ಕಾರಿ ಆದೇಶದ ಪ್ರಕಾರ, ಈ ನ್ಯಾಯಾಲಯವನ್ನು ಎನ್​ಐಎ ಪ್ರಕರಣಗಳ ವಿಚಾರಣೆಗಾಗಿ ವಿಶೇಷವಾಗಿ ಸ್ಥಾಪಿಸಲಾಗಿದೆ. ಆದ್ದರಿಂದ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳ ಬಂಧನ ಅವಧಿಯನ್ನು ವಿಸ್ತರಿಸುವ ಮತ್ತು ಡಿಾಲ್ಟ್​ ಜಾಮೀನು ಆರ್ಜಿಗಳನ್ನು ವಿಚಾರಣೆ ನಡೆಸುವ ಸಂಪೂರ್ಣ ಅಧಿಕಾರ ಇದೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು. 

ಅಧಿಸೂಚನೆಯೇ ಸರಿಯಿಲ್ಲ ಎಂದು ವಾದ 

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಎನ್​ಐಎ ಕಾಯ್ದೆಯ ಸೆಕ್ಷನ್​ 22ರ ಅಡಿಯಲ್ಲಿ ರಾಜ್ಯ ಸರ್ಕಾರ ಅಧಿಕೃತವಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಆದೇಶ ಹೊರಡಿಸಿಲ್ಲ. ಈ ಹಿಂದೆ ಸೆಕ್ಷನ್​ 11ರ ಅಡಿಯಲ್ಲಿ ಹೊರಡಿಸಲಾಗಿದ್ದ ಹಳೆಯ ಅಧಿಸೂಚನೆಯನ್ನೇ ಸೆಕ್ಷನ್​ 22ಕ್ಕೆ ಅನ್ವಯಿಸುತ್ತದೆ ಎಂದು ವಿಭಾಗೀಯ ಪೀಠ ತಪ್ಪಾಗಿ ಪರಿಗಣಿಸಿದೆ. ಆದ್ದರಿಂದ ಈ ಪ್ರಕರಣದಲ್ಲಿ ಬಂಧನ ಆದೇಶ ಹೊರಡಿಸಿರುವುದು ಕಾನೂನುಬಾಹಿರ ಎಂದು ವಾದಿಸಿದ್ದರು.

ಆದೇಶ ಪೂರ್ವಾನ್ವಯಗೊಳಿಸಿದ ಸರ್ಕಾರ: 

ವಿಚಾರಣೆಯ ವೇಳೆ, ರಾಜ್ಯ ಸರ್ಕಾರವು 2025ರಲ್ಲಿ ಹೊರಡಿಸಿದ ಹೊಸ ಅಧಿಸೂಚನೆ ಮತ್ತು ತಿದ್ದುಪಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಇದರಲ್ಲಿ ವಿಶೇಷ ನ್ಯಾಯಾಲಯದ ಸ್ಥಾಪನೆಯನ್ನು 2012ರಿಂದಲೇ ಜಾರಿಗೆ ಬರುವಂತೆ ಪೂರ್ವಾನ್ವಯ ಮಾಡಲಾಗಿತ್ತು. ಸರ್ಕಾರದ ಈ ಕ್ರಮವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ತಾಂತ್ರಿಕ ಕಾರಣಗಳ ಆಧಾರದಲ್ಲಿ ಎನ್​ಐಎ ವಿಶೇಷ ನ್ಯಾಯಾಲಯದ ಅಸ್ತಿತ್ವವನ್ನೇ ಪ್ರಶ್ನಿಸಿದ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದೆ.