ಬೆಂಗಳೂರು: ಹಿಂದು ಉತ್ತರಾಧಿಕಾರ ಕಾಯ್ದೆಯಲ್ಲಿ ಕೆಲವೊಂದು ಕಾನೂನಾತ್ಮಕ ಲೋಪಗಳು ಉಳಿದಿದ್ದು, ಅದನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಾಯ್ದೆಗೆ 2005ರಲ್ಲಿ ತಿದ್ದುಪಡಿ ಮಾಡುವಾಗ ಉಂಟಾದ ಲೋಪದಿಂದಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ವಿಧವೆಯರು ಮತ್ತು ತಾಯಂದಿರ ಹಕ್ಕುಗಳ ಬಗ್ಗೆ ಗೊಂದಲ ಉಂಟಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆಸ್ತಿ ವಿಭಜನೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಹೈಕೋರ್ಟ್ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ದೇವದಾಸ್ ಮತ್ತು ಬಿ.ಮುರಳೀಧರ ಪೈ ಅವರಿದ್ದ ವಿಭಾಗೀಯ ಪೀಠವು ಈ ಅವಲೋಕನ ಮಾಡಿದೆ.
2005ರ ತಿದ್ದುಪಡಿಯು ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಹಕ್ಕು ನೀಡುವಲ್ಲಿ ಐತಿಹಾಸಿಕ ಹೆಜ್ಜೆಯಾಗಿದ್ದರೂ ಸೆಕ್ಷನ್ 6ರ ಅಡಿಯಲ್ಲಿ ಆಸ್ತಿ ಹಂಚಿಕೆ ಮಾಡುವಾಗ ಗೊಂದಲದ ಅಂಶಗಳಿವೆ. ಸೆಕ್ಷನ್ ತಿದ್ದುಪಡಿಗಿಂತ ಮೊದಲು ಪುತ್ರ ಮತ್ತು ಪುತ್ರಿಯ ಜತೆಗೆ ವಿಧವಾ ಪತ್ನಿ ಮತ್ತು ತಾಯಿಗೆ ಆಸ್ತಿಯಲ್ಲಿ ಪಾಲು ನೀಡುವುದನ್ನು ಖಾತರಿಪಡಿಸಲಾಗಿತ್ತು. ಆದರೆ, ತಿದ್ದುಪಡಿಯ ನಂತರ ಆ ಉಲ್ಲೇಖವನ್ನು ಉಳಿಸಿಕೊಳ್ಳಲಾಗಿಲ್ಲ. ಆದ್ದರಿಂದ ಕೆಲವು ಗೊಂದಲಗಳು ಏರ್ಪಡುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ:
2008ರಲ್ಲಿ ಮೃತರಾದ ಗದಗ ಜಿಲ್ಲೆಯ ಹಿರೀಕೊಪ್ಪ ಗ್ರಾಮದ ಮುದಕನಗೌಡ ಎಂಬುವರ ಮೊದಲ ಪತ್ನಿಯ ಪರವಾಗಿದ್ದ ವಿಚಾರಣಾ ನ್ಯಾಯಾಲಯದ ಆಸ್ತಿ ವಿಭಜನೆಗೆ ಸಂಬಂಧಿಸಿದ ಆದೇಶ ಪ್ರಶ್ನಿಸಿ ಅವರ ಎರಡನೇ ಹೆಂಡತಿ ಮತ್ತು ಮೂವರು ಮಕ್ಕಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮೊದಲ ಪತ್ನಿಯ ವಿವಾಹದ ಸಿಂಧುತ್ವದ ಬಗ್ಗೆ ಪ್ರಶ್ನೆಯೆತ್ತಿ ಅದನ್ನು ಅಕ್ರಮ ಎಂದು ವಾದಿಸಿದ್ದರು. ಇದನ್ನು ವಿರೋಧಿಸಿದ ಮೊದಲ ಪತ್ನಿಯು ಆಸ್ತಿಯಲ್ಲಿ ತಮಗಿರುವ ಪಾಲನ್ನು ಸಮರ್ಥಿಸಿಕೊಂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಮೊದಲ ಪತ್ನಿಯನ್ನು ಮುದಕನಗೌಡ ಅವರ ಕಾನೂನುಬದ್ಧ ಪತ್ನಿ ಎಂದು ಅಂಗೀಕರಿಸಿತು. ಅಲ್ಲದೆ, ಎರಡನೇ ಸಂಬಂಧದ ಮಕ್ಕಳೂ ಕಾನೂನುಬದ್ಧ ವಾರಸುದಾರರಾಗಿದ್ದು, ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಎಂದು ತಿಳಿಸಿದೆ. ಆದರೆ, ಅಧಿಕೃತ ವಿವಾಹ ಮಾನ್ಯತೆಗೆ ಒಳಪಡದ ಎರಡನೇ ಹೆಂಡತಿಗೆ ಆಸ್ತಿಯಲ್ಲಿ ಪಾಲು ನಿರಾಕರಿಸಿದೆ.