ನ್ಯೂಸ್

ನಟ ಚೇತನ್ ವಿರುದ್ಧದ ಎಫ್​ಐಆರ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ‘ಕಾಂತಾರ’ ಚಿತ್ರದಲ್ಲಿ ರಿಸಲಾಗಿರುವ ಭೂತಕೋಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ನಟ ಚೇತನ್ ವಿರುದ್ಧ ದಾಖಲಾಗಿರುವ ಎಫ್​ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದ, ನಟ ಚೇತನ್ ವಿಚಾರಣೆ ಎದುರಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್ ರದ್ದು ಕೋರಿ ನಟ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಪೀಠ, ಪ್ರಕರಣವಿನ್ನೂ ತನಿಖಾ ಹಂತದಲ್ಲಿದೆ. ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದೆಂದು ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪಗಳನ್ನು ಆಧರಿಸಿ ಅರ್ಜಿ ವಜಾಗೊಳಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ತಮ್ಮ ಅಭಿಪ್ರಾಯವನ್ನಷ್ಟೇ ಹಂಚಿಕೊಂಡಿದ್ದಾರೆ. ಇದರಿಂದ, ಯಾರಿಗೂ ತೊಂದರೆಯಾಗಿಲ್ಲ, ಸಮಾಜದಲ್ಲಿ ಅಶಾಂತಿಯೂ ಉದ್ಭವಿಸಿಲ್ಲ. ಹೀಗಿದ್ದರೂ, ಅವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದ್ದು, ಅದನ್ನು ರದ್ದುಗೊಳಿಸಬೇಕೆಂದು ಕೋರಿದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರು ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜತೆಗೆ ಪೊಲೀಸರು ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖಾ ಹಂತದಲ್ಲಿರುವ ಪ್ರಕರಣದ ಎಫ್​ಐಆರ್ ರದ್ದುಗೊಳಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಓಟಿಟಿಯಲ್ಲಿ ಕಾಂತಾರ: ವಿಶ್ವದಾದ್ಯಂತ 400 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿಕೊಂಡಿರುವ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರ ಇಂದು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲೂ ಅಮೇಜಾನ್ ಪ್ರೖೆಮ್ಲ್ಲಿಂದು ಚಿತ್ರದ ಡಿಜಿಟಲ್ ಪ್ರೀಮಿಯರ್ ಆಗಲಿದೆ.