- ಗುತ್ತಿಗೆ ನೌಕರರು ವಿಚಾರಣೆ ಹಕ್ಕು ಪ್ರತಿಪಾದಿಸುವಂತಿಲ್ಲ.
- ನೇಮಕಾತಿಗಳು ಒಪ್ಪಂದದ ನಿಯಮಕ್ಕೆ ಬದ್ಧ ಎಂದ ಹೈಕೋರ್ಟ್
ಬೆಂಗಳೂರು: ಸೇವೆಯಿಂದ ವಜಾಗೊಳಿಸುವ ಮೊದಲು ಕಡ್ಡಾಯ ಆಂತರಿಕ ವಿಚಾರಣೆ ನಡೆಸಬೇಕು ಎಂದು ಕೋರಲು ಗುತ್ತಿಗೆ ನೌಕರರಿಗೆ ಕಾನೂನುಬದ್ಧ ಹಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ (ಪಿಎಚ್ಎಂ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕೌಂಟ್ಸ್ ಮ್ಯಾನೇಜರ್ ಆಗಿದ್ದ ಪಿ.ಮಾರುತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಸ್. ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಮಾರುತಿ ಅವರು 2019ರಿಂದ ಪಿಎಚ್ಎಂ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ತಿಂಗಳ ಒಪ್ಪಂದದಲ್ಲಿ ಆರಂಭವಾದ ಸೇವೆಯನ್ನು 5 ವರ್ಷ ವಿಸ್ತರಿಸಲಾಗಿತ್ತು. ಆದರೆ, ಬಿಲ್ ಪಾವತಿ ವಿಳಂಬಕ್ಕೆ ಸಂಬಂಧಿಸಿ ಅವರಿಗೆ 2024ರಲ್ಲಿ ನೋಟಿಸ್ ನೀಡಲಾಗಿತ್ತು. ಅವರು ನೀಡಿದ ಉತ್ತರ ತೃಪ್ತಿಕರವಾಗಿಲ್ಲ ಎಂಬ ಕಾರಣ ನೀಡಿ ಅವರನ್ನು ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಪಿಎಚ್ಎಂ ನಿರ್ದೇಶಕರ ಆದೇಶ ಎತ್ತಿಹಿಡಿದಿತ್ತು. ಇದರ ವಿರುದ್ಧ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು. ತಮ್ಮನ್ನು ದುರ್ನಡತೆ ಆರೋಪದಲ್ಲಿ ವಜಾಗೊಳಿಸಲಾಗಿದೆ. ವಜಾ ಮಾಡುವ ಮೊದಲು ಕಡ್ಡಾಯವಾಗಿ ಆಂತರಿಕ ವಿಚಾರಣೆ ನಡೆಸಬೇಕಿತ್ತು. ನೇರವಾಗಿ ವಜಾ ಮಾಡಿರುವುದರಿಂದ ವೃತ್ತಿ ಜೀವನಕ್ಕೆ ಕಳಂಕ ಉಂಟಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿದಾರರ ವಾದ ನಿರಾಕರಿಸಿರುವ ನ್ಯಾಯಪೀಠ, ಗುತ್ತಿಗೆ ನೌಕರರು ಕಾಯಂ ನೌಕರರಲ್ಲದ ಕಾರಣ, ಅವರು ಕಡ್ಡಾಯ ಆಂತರಿಕ ವಿಚಾರಣೆಯನ್ನು ತಮ್ಮ ಹಕ್ಕು ಎಂದು ಕೋರಲು ಸಾಧ್ಯವಿಲ್ಲ. ಗುತ್ತಿಗೆ ನೇಮಕಾತಿಗಳು ಸಂಪೂರ್ಣವಾಗಿ ಒಪ್ಪಂದದಲ್ಲಿನ ನಿಯಮಗಳಿಗೆ ಒಳಪಟ್ಟಿದ್ದು, ಅದು ನೇಮಕಾತಿ ಪ್ರಾಧಿಕಾರದ ಇಚ್ಛೆಗೆ ಒಳಪಟ್ಟಿದೆ. ಪ್ರಕರಣದಲ್ಲಿ ವಜಾ ಮಾಡುವ ಮೊದಲು ಸಂಬಂಧಪಟ್ಟ ಅಧಿಕಾರಿಯ ಅನುಮತಿ ಪಡೆಯಲಾಗಿದೆ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.