ಬೆಂಗಳೂರು: ವಿಭಾಗೀಯ ನ್ಯಾಯಪೀಠದ ತೀರ್ಪನ್ನು ಪರಿಗಣಿಸದೇ ಶಿಕ್ಷಕರೊಬ್ಬರ ನೇಮಕಾತಿ ಆದೇಶ ರದ್ದು ಮಾಡಿರುವ ಶಿಕ್ಷಣ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಕ್ರಮವು ನ್ಯಾಯಾಂಗ ನಿಂದನೆಗೆ ಸಮವಾಗಿದೆ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಲಯದ ಆದೇಶಗಳನ್ನು ಗಾಳಿಗೆ ತೂರುವಂಥ ಯಾವುದೇ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಸರ್ಕಾರಕ್ಕೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಗದಗ ಜಿಲ್ಲೆಯ ನರಗುಂದದ ಪ್ರಭಾಕರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಅಭಿಪ್ರಾಯಪಟ್ಟಿದೆ.
ರೋಣ ತಾಲೂಕಿನ ಮೆಣಸಗಿ ಗ್ರಾಮದ ಶರಣಬಸವೇಶ್ವರ ಅನುದಾನಿತ ಪ್ರೌಡಶಾಲೆಯ ಸಹಾಯಕ ಶಿಕ್ಷಕರ ಹುದ್ದೆಗೆ 2010ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಅದರಲ್ಲಿ ಅರ್ಜಿದಾರರಾದ ಪ್ರಭಾಕರ್ ಶೇ.77.18 ಅಂಕ ಗಳಿಸಿ ಹುದ್ದೆಗೆ ಆಯ್ಕೆಯಾಗಿದ್ದರು. ಶೇ. 64.5 ಅಂಕ ಗಳಿಸಿದ ಮೆಣಸಗಿಯ ಶರಣಪ್ಪ ಎಂಬುವರು ಈ ಆಯ್ಕೆಯನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ, ಅವರ ಅರ್ಜಿಯನ್ನು 2012ರಲ್ಲಿ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಮತ್ತು ವಿಭಾಗೀಯ ಪೀಠಗಳೆರಡೂ ವಜಾಗೊಳಿಸಿದ್ದವು. ಪ್ರಭಾಕರ್ ಅವರ ನೇಮಕಾತಿಯು ಮೆರಿಟ್ ಆಧಾರದಲ್ಲಿ ನಡೆದಿದೆ. ಆದ್ದರಿಂದ ಅವರ ನೇಮಕಾತಿ ಸರಿಯಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ನ್ಯಾಯಾಲಯದಲ್ಲಿ ಸೋಲನುಭವಿಸಿದ ಬಳಿಕ ಶರಣಪ್ಪ ಶಿಕ್ಷಣ ಇಲಾಖೆಯ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಶರಣಪ್ಪ ಅವರ ಹಿಂದಿನ ಸೇವಾವಧಿಗೆ ವೈಟೇಜ್ ಅಂಕಗಳನ್ನು ನೀಡಿದ ಮೇಲ್ಮನವಿ ಪ್ರಾಧಿಕಾರವು ಪ್ರಭಾಕರ್ ಅವರ ನೇಮಕಾತಿಯನ್ನು ರದ್ದುಪಡಿಸಿತ್ತು. ಇದನ್ನು ಪ್ರಭಾಕರ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಭಾಕರ್ ಅವರ ನೇಮಕಾತಿಯನ್ನು ಎತ್ತಹಿಡಿದಿದ್ದು, ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದೆ.
ಸರ್ಕಾರದಿಂದ ನ್ಯಾಯಾಂಗ ನಿಂದನೆ:
ಸರ್ಕಾರವು ನೇಮಕಾತಿ ರದ್ದು ಮಾಡುವಾಗ ಸಹಜ ನ್ಯಾಯವನ್ನು ಉಲ್ಲಂಘಿಸಿದೆ. ಪ್ರಭಾಕರ್ ವಾದವನ್ನು ಆಲಿಸದೆ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠವು ಈಗಾಗಲೆ ದೃಢಪಡಿಸಿದ ನೇಮಕಾತಿಯನ್ನು ತನ್ನ ಅಧಿಕಾರ ವ್ಯಾಪ್ತಿ ಮೀರಿ ರದ್ದುಪಡಿಸಿದೆ. ಇದು ನ್ಯಾಯಾಂಗ ನಿಂದನೆಗೆ ಸಮವಾಗಿದೆ. ಶರಣಪ್ಪ ಅವರಿಗೆ ವೈಟೇಜ್ ಅಂಕಗಳ ಹಕ್ಕು ಇದ್ದಿದ್ದರೆ ಅದನ್ನು ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗಳಲ್ಲಿ ಪ್ರಸ್ತಾಪಿಸಬೇಕಿತ್ತು. ಬದಲಾಗಿ ಸುತ್ತಿ ಬಳಸಿ ಸರ್ಕಾರದಿಂದ ಆದೇಶ ಪಡೆಯಬಾರದಿತ್ತು ಎಂದು ನ್ಯಾಯಪೀಠ ಹೇಳಿದೆ.
ನೇಮಕಾತಿ ರದ್ದುಗೊಳಿಸಿದ ಅಧಿಕಾರಿ ಈಗಾಗಲೇ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ದಂಡ ವಿಧಿಸುವುದರಿಂದ ನ್ಯಾಯಾಲಯ ಹಿಂದೆ ಸರಿಯಿತು. ಆದರೆ, ಈ ಬಗ್ಗೆ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವ ನ್ಯಾಯಪೀಠ, ಹೈಕೋರ್ಟ್ನ ಆದೇಶಗಳನ್ನು ಮೀರುವಂತಹ ಅರ್ಜಿಗಳನ್ನು ಭವಿಷ್ಯದಲ್ಲಿ ಪರಿಗಣಿಸಿದರೆ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತು.