ನ್ಯೂಸ್

ಇಸ್ಕಾನ್ ನಿಷೇಧಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ; ವಿಚಾರಣೆ ವೇಳೆ ಹೈಕೋರ್ಟ್​​​ ಹೇಳಿದಿಷ್ಟು.. | ISKCON

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ನಿರಂತರ ದಾಳಿಗಳ ನಡುವೆ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್-ISKCON) ಅನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್‌ಗೆಬುಧವಾರ(ನವೆಂಬರ್​​ 27) ಅರ್ಜಿ ಸಲ್ಲಿಸಲಾಗಿದೆ. ಚಿತ್ತಗಾಂಗ್ ಮತ್ತು ರಂಗ್‌ಪುರ ನಗರಗಳಲ್ಲಿ ನಡೆಯುತ್ತಿರುವ ಅಶಾಂತಿಯನ್ನು ತಡೆಯಲು ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇಸ್ಕಾನ್‌ನ ಇತ್ತೀಚಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೈಕೋರ್ಟ್ ಸರ್ಕಾರವನ್ನು ಕೇಳಿದೆ ಎಂದು ಸ್ಥಳಿಯ ಮಾಧ್ಯಮ ಡೈಲಿ ಸ್ಟಾರ್ ವರದಿ ಮಾಡಿದೆ. ಸರ್ಕಾರದ ಕ್ರಮಗಳ ಕುರಿತು ಗುರುವಾರ ಮಾಹಿತಿ ನೀಡುವಂತೆ ಅಟಾರ್ನಿ ಜನರಲ್ ಮೊಹಮ್ಮದ್ ಅಸಾದುಝಮಾನ್ ಅವರಿಗೆ ನ್ಯಾಯಾಲಯ ಸೂಚಿಸಿದೆ. ಹೈಕೋರ್ಟ್ ಪೀಠದಲ್ಲಿ ನ್ಯಾಯಮೂರ್ತಿ ಫರಾ ಮೆಹಬೂಬ್ ಮತ್ತು ನ್ಯಾಯಮೂರ್ತಿ ದೇಬಶಿಶ್ ರಾಯ್ ಚೌಧರಿ ಇದ್ದಾರೆ.

ಬಾಂಗ್ಲಾದೇಶ ಸರ್ಕಾರವು ಇಸ್ಕಾನ್ ಅನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ಘೋಷಿಸಿದೆ. ಇದು ಸರ್ಕಾರದ ಮುಖ್ಯ ಅಜೆಂಡಾವಾಗಿದ್ದು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಬಾಂಗ್ಲಾದೇಶದ ಅಟಾರ್ನಿ ಜನರಲ್ ಹೈಕೋರ್ಟ್​​​ಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪರಿಸ್ಥಿತಿಯನ್ನು ಪರಿಹರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರ ವಹಿಸುವಂತೆ ಹೈಕೋರ್ಟ್ ಬಾಂಗ್ಲಾ ಸರ್ಕಾರಕ್ಕೆ ಸೂಚಿಸಿದೆ.

ಏನಿದು ಘಟನೆ

ನವೆಂಬರ್ 25 ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಯಿತು. ಅಂದಿನಿಂದ ಹಿಂಸಾಚಾರ ಮತ್ತು ಅಶಾಂತಿ ಪ್ರಾರಂಭವಾಗಿದೆ. ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ರಕ್ಷಣೆಗಾಗಿ ಕೆಲಸ ಮಾಡಲು ಪ್ರಸಿದ್ಧರಾಗಿದ್ದರು. ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದ್ದು ಜಾಮೀನು ನಿರಾಕರಿಸಲಾಗಿದೆ. ಆತನ ಬಂಧನದ ನಂತರ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಪ್ರಾರಂಭವಾದವು. ಆತನ ಬಿಡುಗಡೆಗೆ ಹಿಂದೂ ಸಮುದಾಯ ಒತ್ತಾಯಿಸಿದೆ.

ಚಿತ್ತಗಾಂಗ್ ನ್ಯಾಯಾಲಯದ ಹೊರಗೆ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಈ ಪ್ರತಿಭಟನೆಯಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದಾರೆ. ಈ ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರು ಇತ್ತೀಚೆಗೆ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಮನ ಸೆಳೆಯಲು ಮತ್ತು ಸಮುದಾಯಕ್ಕೆ ಬಲವಾದ ರಕ್ಷಣೆ ನೀಡುವಂತೆ ಒತ್ತಾಯಿಸಲು ಹಲವಾರು ಪ್ರತಿಭಟನೆಗಳನ್ನು ಆಯೋಜಿಸಿದ್ದರು. ಅವರ ಬಂಧನವು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಭಯ ಮತ್ತು ಅಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇಸ್ಕಾನ್ ವಕ್ತಾರರು ಹೇಳಿದ್ದೇನು

ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರ ಬಂಧನವನ್ನು ಇಸ್ಕಾನ್ ಖಂಡಿಸಿದೆ. ಅಂತಾರಾಷ್ಟ್ರೀಯ ಸಮುದಾಯವು ಮಧ್ಯಪ್ರವೇಶಿಸಬೇಕೆಂದು ಕರೆ ನೀಡಿದೆ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಗೆ ವಿಶ್ವಸಂಸ್ಥೆ ಕ್ರಮಕೈಗೊಳ್ಳಬೇಕು’ ಎಂದು ಇಸ್ಕಾನ್ ವಕ್ತಾರರು ಹೇಳಿದ್ದಾರೆ.

ಕಳವಳ ವ್ಯಕ್ತಪಡಿಸಿದ ಭಾರತ

ಈ ಬೆಳವಣಿಗೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ಘಟನೆಯು ಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಮೂಲಭೂತವಾದಿಗಳ ದಾಳಿಗಳ ಸರಣಿಯನ್ನು ಅನುಸರಿಸುತ್ತದೆ. ಇವುಗಳಲ್ಲಿ ಅಲ್ಪಸಂಖ್ಯಾತರ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳಿಗೆ ಬೆಂಕಿ ಹಚ್ಚುವುದು, ಲೂಟಿ, ಕಳ್ಳತನ ಮತ್ತು ದೇವಾಲಯಗಳು ಮತ್ತು ದೇವತೆಗಳ ಅಪವಿತ್ರಗೊಳಿಸುವಿಕೆ ಸೇರಿವೆ ಎಂದು ಹೇಳಿದೆ.(ಏಜೆನ್ಸೀಸ್​​)