ಬೆಂಗಳೂರು : ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್ ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಶ್ರೀಧರ್ ಪೂಜಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸದಾಗಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಸೂಚನೆಯಂತೆ ತನಿಖಾಧಿಕಾರಿ ಮುಂದೆ ಪೂಜಾರ ವಿಚಾರಣೆಗೆ ಒಳಪಟ್ಟಿದ್ದರು. ಈ ಸಂದರ್ಭದಲ್ಲಿ ಪೂಜಾರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್ ಜಪ್ತಿ ಮಾಡಲಾಗಿದೆ. ಈಗ ಮತ್ತೆ ಅರ್ಜಿದಾರರ ವಿರುದ್ಧ ಸಂಚು ರೂಪಿಸಿ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಅಲ್ಲದೆ ಪೂಜಾರ ತನಿಖಾಧಿಕಾರಿಯ ಮುಂದೆ ಹಾಜರಾಗಲು ಸಿದ್ಧರಿದ್ದಾರೆ. ಆದರೆ, ಅವರ ಹಿತಾಸಕ್ತಿ ಕಾಪಾಡಬೇಕು. ಪೂಜಾರ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದು, ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಒಂದೊಮ್ಮೆ ಪೂಜಾರ ಬಂಧನವಾದರೆ ಪ್ರತಿವಾದಿಗಳು ಬಂಧನದ ವಿಚಾರವನ್ನು ಪ್ರಸ್ತಾಪಿಸಬಹುದು. ಅವರ ಇಡೀ ಸೇವೆಯು ಕಳಂಕಿತವಾಗಲಿದೆ ಎಂದು ವಾದ ಮಂಡಿಸಿದರು.
ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್ ಜಗದೀಶ್, ಈ ಪ್ರಕರಣದಲ್ಲಿ ಕೆಲವು ಪರಿಕರಗಳನ್ನು ಜಪ್ತಿ ಮಾಡಬೇಕಿದೆ. ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಾಂತ್ ಅಲಿಯಾಸ್ ಶ್ರೀಕಿ ಭಾಗಿಯಾಗಿರುವ ಪ್ರಕರಣದಲ್ಲಿ ಆತನನ್ನು ಕೆಲವು ಲೈವ್ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಬಳಸಲಾಗಿದೆ. ಅಲ್ಲಿಂದ ಬಿಟ್ ಕಾಯಿನ್‌ಗಳನ್ನು ಕದಿಯಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸಾವಿರಾರೂ ಕೋಟಿ ರೂ. ಮೌಲ್ಯದ ಹಗರಣವಾಗಿದೆ. ಇದಕ್ಕೆ ವಿಸ್ತೃತವಾದ ಆಕ್ಷೇಪಣೆ ಸಲ್ಲಿಸಬೇಕಿದೆ ಎಂದರು.
ಮೇ 2ರಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ಪೂಜಾರಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ಕೆಲವು ಪರಿಕರಗಳನ್ನು ಜಪ್ತಿ ಮಾಡಬೇಕಿದೆ. ಪೂಜಾರ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿ, ಇಡೀ ತನಿಖೆಯನ್ನು ದಾರಿ ತಪ್ಪಿಸಿದ್ದಾರೆ. ತನಿಖೆ ಹಳಿ ತಪ್ಪಿದೆ. ಅವರಿಗೆ ಮಧ್ಯಂತರ ರಕ್ಷಣೆ ನೀಡುವುದು ಸೂಕ್ತವಲ್ಲ. ವಾಟ್ಸ್‌ಆ್ಯಪ್ ಸಂವಹನ ಪತ್ತೆಯಾದ ಮೇಲೆ ಶ್ರೀಧರ್ ಪೂಜಾರ ಮತ್ತು ಇತರೆ ಅಧಿಕಾರಿಗಳು ಎಸಗಿರುವ ಅಪರಾಧ ಬಹಿರಂಗವಾಗಿದೆ. ಪ್ರಕರಣ ನಡೆದ ಸಂದರ್ಭದಲ್ಲಿ ಒಂದು ಬಿಟ್ ಕಾಯಿನ್ ಮೌಲ್ಯ 40 ಲಕ್ಷ ರೂ. ಇತ್ತು. ಈಗ ಅದು 50 ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ವಿರೋಧಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ನಿಮ್ಮ (ಪ್ರಾಸಿಕ್ಯೂಷನ್)ವಾದ ಸಿದ್ಧವಾಗಿದ್ದರೆ, ಅದನ್ನು ಆಕ್ಷೇಪಣೆಯ ಮೂಲಕ ಸಲ್ಲಿಸಿ. ಅಲ್ಲಿಯವರೆಗೆ ಪೂಜಾರ ಅವರನ್ನು ಹಿಡಿಯುವ ಪ್ರಯತ್ನ ಮಾಡಬಾರದು. ಮುಂದಿನ ವಿಚಾರಣೆವರೆಗೆ ಪೂಜಾರ ಅವರನ್ನು ಬಂಧಿಸಬಾರದು ಎಂದು ಆದೇಶಿಸಿತು. ವಿಚಾರಣೆಯನ್ನು ಬುಧವಾರಕ್ಕೆ (ಜೂನ್ 12) ಮುಂದೂಡಿತು.