ಕೊತ್ತೂರು ಜಿ.ಮಂಜುನಾಥ್​ 
ನ್ಯೂಸ್

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ತನಿಖೆಗೆ ಹೈ ಕೋರ್ಟ್​ ಆದೇಶ

ಕೋಲಾರ: ಮುಳಬಾಗಿಲು ಮಾಜಿ ಶಾಸಕ ಹಾಗೂ ಕೋಲಾರ ಹಾಲಿ ಶಾಸಕ ಕೊತ್ತೂರು ಮಂಜುನಾಥ್​ ಅವರ ಸುಳ್ಳು ಜಾತಿ ಪ್ರಮಾಣ ಪತ್ರದ ಪ್ರಕರಣದ ತನಿಖೆಗೆ ಹೈಕೋರ್ಟ್​ ಗುರುವಾರ ಅನುಮತಿ ನೀಡಿದ್ದು, ಎ್​ಐಆರ್​ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾಗ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಗೆಲುವು ಸಾಧಿಸಿದ್ದರು. ಈ ಸಂಬಂಧ ಪೋರ್ಜರಿ, ವಂಚನೆ, ಅಟ್ರಾಸಿಟಿ ಕಾಯ್ದೆಯಡಿ 2018ರಲ್ಲಿ ಮುಳಬಾಗಿಲು ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈಗ ಈ ಪ್ರಕರಣದ ರದ್ದು ಕೋರಿ ಕೊತ್ತೂರು ಮಂಜುನಾಥ್​ ರಿಟ್​ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಮೂರ್ತಿ ನಾಗಪ್ರಸನ್ನ, ರಿಟ್​ ಅರ್ಜಿ ವಜಾಗೊಳಿಸಿ, ಶೀಘ್ರ ತನಿಖೆ ಪೂರ್ಣಗೊಳಿಸಬೇಕು, ತನಿಖೆಗೆ ಆರೋಪಿಯು ಸಹಕಾರ ನೀಡಬೇಕು ಎಂದು ಸೂಚಿಸಿದ್ದಾರೆ.

* ಪ್ರಕರಣದ ಹಿನ್ನೆಲೆ ಏನು?:

ಪರಿಶಿಷ್ಟ ಜಾತಿ ಪಟ್ಟಿಗೆ ಬರುವ ಬುಡುಗ ಜಂಗಮ ಜಾತಿಯವರು ಎಂದು ಘೋಷಿಸಿಕೊಂಡು ಕೊತ್ತೂರು ಜಿ.ಮಂಜುನಾಥ್​ 2013ರಲ್ಲಿ ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಜೆಡಿಎಸ್​ ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಜಾತಿ ಪ್ರಮಾಣಪತ್ರದ ಸಿಂಧುತ್ವ ಪ್ರಶ್ನಿಸಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿಗೆ ಸೇರಿರುವುದನ್ನು ಸಾಬೀತುಪಡಿಸಲು ಮಂಜುನಾಥ್​ ವಿಫಲರಾದ ಹಿನ್ನೆಲೆಯಲ್ಲಿ ಆಯ್ಕೆಯನ್ನು ಹೈಕೋರ್ಟ್​ 2018ರ ಏಪ್ರಿಲ್​ನಲ್ಲಿ ಅಸಿಂಧುಗೊಳಿಸಿತ್ತು. ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಮಂಜುನಾಥ್​ ಅರ್ಜಿಯನ್ನು ಅಲ್ಲೂ ವಜಾಗೊಳಿಸಿ, ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನೆ ಸಮಿತಿ ಈ ಬಗ್ಗೆ ಪರಿಶೀಲಿಸಬೇಕು. ಸಮಿತಿಯ ರ್ನಿಣಯದ ಬಗ್ಗೆ ಆಕ್ಷೇಪವಿದ್ದರೆ ಹೈಕೋರ್ಟ್​ನಲ್ಲಿ ಪ್ರಶ್ನಿಸಬಹುದು ಎಂದು ಆದೇಶಿಸಿತ್ತು.

ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ಜಿ.ಮಂಜುನಾಥ್​ ಬೈರಾಗಿ ಜಾತಿಗೆ ಸೇರಿದವರು ಎಂದು ರ್ನಿಣಯ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಬುಡುಗ ಜಂಗಮ ಪರಿಶಿಷ್ಟ ಜಾತಿಯಾದರೆ, ಬೈರಾಗಿ ಒಬಿಸಿ ಪ್ರವರ್ಗ-&1ಕ್ಕೆ ಸೇರುತ್ತದೆ ಎಂದು ತಿಳಿಸಿತ್ತು, ಸಮಿತಿಯ ರ್ನಿಣಯವನ್ನು ಮಂಜುನಾಥ್​ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.