ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ವಿ .ಶ್ರೀಷಾನಂದ ವಿರುದ್ಧ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲೇ ಈ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಸೂರ್ಯಕಾಂತ್ ಹಾಗೂ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪಂಚಸದಸ್ಯ ಪೀಠ ಈ ವಿವಾದದ ಸಂಬಂಧ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ವರದಿ ಕೇಳಿದೆ. ಅಲ್ಲದೆ ಪ್ರಕರಣ ಸಂಬಂಧ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಾಯವನ್ನೂ ಬಯಸಿದೆ.
ವಕೀಲೆಗೆ ಕುಟುವಾಗಿ ಟೀಕೆ: ಮತ್ತೊಂದು ವೀಡಿಯೊದಲ್ಲಿ ಪ್ರತಿವಾದಿ ವಕೀಲರೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಮಹಿಳಾ ವಕೀಲರೊಬ್ಬರನ್ನು ನಿರ್ದಾಕ್ಷಿ್ಯಣ್ಯವಾಗಿ ಟೀಕಿಸಿದ್ದರು. ಅವರ ಬಗ್ಗೆ (ಎದುರು ಪಕ್ಷ) ನಿಮಗೆ ಪೂರ್ತಿ ಗೊತ್ತಿದೆ! ನಾಳೆ ಬೆಳಗ್ಗೆ ಕೇಳಿದರೆ ಇನ್ನೇನಾದರೂ ಹೇಳುತ್ತೀರಿ. ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂದೂ ಹೇಳುತ್ತೀರಿ ಎಂದು ವಕೀಲೆಗೆ ಕಟುವಾಗಿ ಹೇಳಿದ್ದರು. ನ್ಯಾಯಮೂರ್ತಿಗಳು ಕಲಾಪದಲ್ಲಿ ವ್ಯಕ್ತಪಡಿಸಿರುವ ಮಾತುಗಳುವ ಸಾಮಾಜಿಕ ಮಾಧ್ಯಮ ಮಾತ್ರವಲ್ಲದೆ, ವಕೀಲ ವೃಂದದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಲೈವ್ ಸ್ಟ್ರೀಮಿಂಗ್ ನಿರ್ಬಂಧಕ್ಕೆ ಮನವಿ: ಶ್ರೀಷಾನಂದ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಬೆಂಗಳೂರಿನ ವಕೀಲರ ಸಂಘವು (ಎಎಬಿ) ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವು ದಿನಗಳವರೆಗೆ ಹೈಕೋರ್ಟ್ ಲೈವ್ ಸ್ಟ್ರೀಮಿಂಗ್ ನಿರ್ಬಂಧಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿಗೆ ಪತ್ರ ಬರೆದಿದೆ. ನ್ಯಾಯಮೂರ್ತಿ ಶ್ರೀಷಾನಂದ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಗಂಭೀರ ವಿವಾದ ಸೃಷ್ಟಿಸಿದ್ದು, ನ್ಯಾಯಮೂರ್ತಿಗಳ ಹೇಳಿಕೆಯು ವೈರಲ್ ಆಗಿದೆ. ಇದರಿಂದ ವಕೀಲ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಹಿರಿ-ಕಿರಿಯರೆನ್ನದೇ ಎಲ್ಲ ವಕೀಲರ ಭಾವನೆಗಳಿಗೂ ನೋವುಂಟಾಗಿದೆ. ಇಂಥ ಹೇಳಿಕೆಗಳಿಗೆ ವಕೀಲರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಕಾರ್ಯದರ್ಶಿ ಟಿ.ಜಿ ರವಿ ಮತ್ತು ಖಜಾಂಚಿ ಎಂ.ಟಿ ಹರೀಶ್ ಅವರು ಸಹಿ ಮಾಡಿರುವ ಪತ್ರದಲ್ಲಿ ವಿವರಿಸಲಾಗಿದೆ.
ಗೋರಿಪಾಳ್ಯ ಪಾಕಿಸ್ತಾನದಲ್ಲಿದೆ..!: ನ್ಯಾಯಮೂರ್ತಿ ವಿ. ಶ್ರೀಷಾನಂದ ಎರಡು ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಒಂದು ವಿಡಿಯೋದಲ್ಲಿ ನಗರದ ಗೋರಿಪಾಳ್ಯದ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶವನ್ನು ‘ಪಾಕಿಸ್ತಾನ’ ಎಂದು ಕರೆದಿದ್ದರು. ಮೈಸೂರು ರಸ್ತೆಯ ಮೇಲ್ಸೆತುವೆ ಸಾಗುವ ಗೋರಿಪಾಳ್ಯದಿಂದ ಮಾರುಕಟ್ಟೆಯವರೆಗಿನ ಪ್ರದೇಶ ಭಾರತದಲ್ಲಿ ಇಲ್ಲ. ಅದು ಪಾಕಿಸ್ತಾನದಲ್ಲಿದೆ. ಇದು ವಾಸ್ತವ.. ಇದು ವಾಸ್ತವ.. ಎಂತಹುದೇ ಕಟ್ಟುನಿಟ್ಟಿನ ದಕ್ಷ ಪೊಲೀಸ್ ಅಧಿಕಾರಿಯನ್ನು ಅಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದರೂ ಅವರನ್ನು ಹಿಡಿದುಬಿಡಲಿ ನೋಡುತ್ತೇನೆ ಎಂದಿದ್ದರು.
ನ್ಯಾಯಾಲಯದ ಕಲಾಪದ ಕೆಲವು ವಿಡಿಯೊಗಳು ಇತ್ತಿಚೇಗೆ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಪೂರ್ವಾನುಮತಿ ಪಡೆಯದೆ ವಿಡಿಯೋ ರೆಕಾರ್ಡಿಂಗ್, ಹಂಚಿಕೆ ಮಾಡಿದಲ್ಲಿ ಸೂಕ್ತ ಕ್ರಮ ಜರಗಿಸುವುದಾಗಿ ಎಚ್ಚರಿಸಿದೆ. ಈ ಸಂಬಂಧ ರೂಪಿಸಿರುವ ಅಧಿಸೂಚನೆಯನ್ನು ಪ್ರತಿ ಕೋರ್ಟ್ ಹಾಲ್ಗಳ ವಿಡಿಯೋ ಕಾನ್ಪರೆನ್ಸ್ ಕಲಾಪ ಆರಂಭವಾಗುವ ಮೊದಲು ಬಿತ್ತರಿಸಲಾಯಿತು. ಅಧಿಕೃತವಾಗಿ ನ್ಯಾಯಾಲಯದಿಂದ ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಘಟಕವನ್ನು ಹೊರತುಪಡಿಸಿ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು ಸೇರಿ ಯಾರೇ ಆಗಲಿ ಕಲಾಪದ ಲೈವ್ ಸ್ಟ್ರೀಮಿಂಗ್ ಅಥವಾ ಹೈಕೋರ್ಟ್ ಯೂಟ್ಯೂಬ್ ಚಾನಲ್ನಲ್ಲಿನ ವಿಡಿಯೋಗಳನ್ನು ರೆಕಾರ್ಡ್ ಮಾಡುವುದಾಗಲಿ, ಪ್ರಸರಣ ಮಾಡುವಂತಿಲ್ಲ ಎಂದು ಹೇಳಿದೆ. ಈ ನಿರ್ಬಂಧವು ಎಲ್ಲ ಅಪ್ಲಿಕೇಶನ್ಗಳಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕರ್ನಾಟಕ ಹೈಕೋರ್ಟ್ 2022ರ ಜ.1ರಿಂದ ನ್ಯಾಯಾಲಯ ಕಲಾಪಗಳ ನೇರಪ್ರಸಾರ ಜಾರಿಗೊಳಿಸಿದ್ದು ಇದರಲ್ಲಿ ಲೈವ್ ಸ್ಟ್ರೀಮಿಂಗ್ ಹಾಗೂ ರೆಕಾರ್ಡಿಂಗ್ ಲಭ್ಯವಿತ್ತು.