ನವದೆಹಲಿ: ಕಳೆದ ಮೂರು ದಿನಗಳಿಂದ ಈಶಾನ್ಯ ದೆಹಲಿ ರಕ್ತಸಿಕ್ತವಾಗಿದೆ. ಸಿಎಎ ಪರ-ವಿರೋಧಿ ಬಣಗಳ ನಡುವಿನ ಸಂಘರ್ಷದಿಂದ ಉಂಟಾದ ಹಿಂಸಾಚಾರದಲ್ಲಿ ಇದುವರೆಗೆ ಜೀವ ಕಳೆದುಕೊಂಡವರು 22 ಮಂದಿ.
ಹಿಂಸಾಚಾರದ ಪ್ರಕರಣವನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಕಪಿಲ್ ಮಿಶ್ರಾ ಆಡಿರುವ ಪ್ರಚೋದನಾಕಾರಿ ಭಾಷಣದ ಆಡಿಯೋವನ್ನು ಕೇಳಿಸಿಕೊಂಡಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಸಂಬಂಧಪಟ್ಟ ಗಲಭೆಯನ್ನು ಸಹಿಸಿಕೊಳ್ಳುವುದಿಲ್ಲ. 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಯಂತಹ ಹಿಂಸಾಚಾರ ಇನ್ನೊಮ್ಮೆ ನಡೆಯಲು ಕೋರ್ಟ್ ಯಾವ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಗಲಭೆಯ ಮೇಲೆ ಕೋರ್ಟ್ ಕಣ್ಗಾವಲು ಇಡಲು ಸಾಧ್ಯವಿಲ್ಲ. ಹಿಂಸಾಚಾರದಿಂದ ಹಾನಿಗೊಳಗಾದ ಪ್ರದೇಶಗಳಿಗೆ ದೆಹಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಭೇಟಿಕೊಡಬೇಕು. ಸಂತ್ರಸ್ತ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ಸಂತ್ರಸ್ತರಿಗಾಗಿ ಸಹಾಯವಾಣಿ ಕೇಂದ್ರ ತೆರೆಯಬೇಕು. ಗಾಯಾಳುಗಳನ್ನು ಸುರಕ್ಷಿತವಾಗಿ ಸಾಗಿಸಲು ಖಾಸಗಿ ಆಂಬುಲೆನ್ಸ್ಗಳನ್ನು ಒದಗಿಸಬೇಕು. ಮನೆಯನ್ನು ಕಳೆದುಕೊಂಡವರಿಗೆ ಆಶ್ರಯಕೇಂದ್ರಗಳನ್ನು ನಿರ್ಮಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ದೆಹಲಿ ಆಡಳಿತಕ್ಕೆ ಸೂಚಿಸಿದೆ. (ಏಜೆನ್ಸೀಸ್)